ಪೋಸ್ಟರ್ ಹಾಗು ಟೀಸರ್ನಿಂದಲೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಕ್ ಆಗುತ್ತಿರುವ ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ 'ಮದಗಜ' ಬಹುತೇಕ ಚಿತ್ರೀಕರಣ ಮುಗಿಸಿ ಕುಂಬಳಕಾಯಿ ಒಡೆದಿದೆ. ಭರ್ಜರಿ ಆ್ಯಕ್ಷನ್ ಜೊತೆ ಕಲರ್ ಫುಲ್ ಲವ್ ಸ್ಟೋರಿ ಹೊಂದಿರುವ ಚಿತ್ರಕ್ಕೆ 'ಅಯೋಗ್ಯ' ಸಿನಿಮಾ ಖ್ಯಾತಿಯ ನಿರ್ದೇಶಕ ಮಹೇಶ್ ಕುಮಾರ್ ಆ್ಯಕ್ಷನ್ ಕಟ್ ಹೇಳಿದ್ದಾರೆ.
ವಾರಣಾಸಿ, ರಾಮೋಜಿ ಫಿಲ್ಮ್ ಸಿಟಿ, ಬೆಂಗಳೂರು ಹಾಗೂ ಮೈಸೂರು ಸೇರಿದಂತೆ ಹಲವು ಪ್ರದೇಶಗಳಲ್ಲಿ ಸುಮಾರು 74 ದಿನಗಳ ಕಾಲ ಮದಗಜದ ಚಿತ್ರದ ಚಿತ್ರೀಕರಣ ಮಾಡಲಾಗಿದೆ. ಪಕ್ಕಾ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿರುವ ಶ್ರೀಮುರಳಿ ಜೊತೆ ಗ್ಲ್ಯಾಮರ್ ಹಾಗೂ ಬೋಲ್ಡ್ ಪಾತ್ರದಲ್ಲಿ ಆಶಿಕಾ ರಂಗನಾಥ್ ಕಾಣಿಸಿಕೊಂಡಿದ್ದಾರೆ. ಟಾಲಿವುಡ್ ನಟ ಜಗಪತಿ ಬಾಬು, ರಂಗಾಯಣ ರಘು, ಚಿಕ್ಕಣ್ಣ, ಶಿವರಾಜ್ ಕೆ.ಆರ್. ಪೇಟೆ, ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ.
ಕಲಾ ನಿರ್ದೇಶಕ ಮೋಹನ್ ಬಿ.ಕೆರೆ ಅದ್ದೂರಿ ಸೆಟ್ಟುಗಳನ್ನ ಹಾಕಿದ್ದಾರೆ. ಸೌತ್ ಸಿನಿಮಾ ಇಂಡಸ್ಟ್ರಿಯ ಖ್ಯಾತ ಸ್ಟಂಟ್ ಮಾಸ್ಟರ್ಗಳಾದ ರಾಮ ಲಕ್ಷ್ಮಣ್, ಮದಗಜ ಚಿತ್ರದಲ್ಲಿ ಅದ್ದೂರಿ ಆ್ಯಕ್ಷನ್ ಸಿಕ್ವೇನ್ಸ್ಗಳನ್ನ ಕಂಪೋಸ್ ಮಾಡಿದ್ದಾರೆ. ಕೊರಿಯೋಗ್ರಾಫರ್ ಮುರಳಿ ಈ ಚಿತ್ರಕ್ಕೆ ನೃತ್ಯ ಸಂಯೋಜನೆ ಮಾಡಿದ್ದಾರೆ. ನವೀನ್ ಕುಮಾರ್ ಕ್ಯಾಮರಾ ವರ್ಕ್, ರವಿ ಬಸ್ರೂರು ಸಂಗೀತ ಈ ಚಿತ್ರಕ್ಕಿದೆ. ಅದ್ದೂರಿ ವೆಚ್ಚದಲ್ಲಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ನಿರ್ಮಾಣ ಮಾಡಿದ್ದಾರೆ.
ಬಹುತೇಕ ಚಿತ್ರೀಕರಣ ಮುಗಿಸಿರೋ ಮದಗಜ ಕನ್ನಡ, ತೆಲುಗು, ತಮಿಳು ಹಾಗು ಮಲಯಾಳಂ ಭಾಷೆಯಲ್ಲಿ ಬಿಡುಗಡೆ ಆಗಲಿದೆ. ಸದ್ಯ ಚಿತ್ರೀಕರಣ ಮುಗಿಸಿರೋ ಮದಗಜ ಚಿತ್ರತಂಡ, ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನ ಮುಗಿಸಿ ಬಹುಶಃ ಮುಂದಿನ ವರ್ಷಕ್ಕೆ ಸಿನಿಮಾ ಬಿಡುಗಡೆ ಮಾಡುವ ಸಾಧ್ಯತೆ ಇದೆ.