ಹೊಸಕೋಟೆ: ನಗರದ ಹೊರವಲಯದಲ್ಲಿನ ಕೊಳತೂರು ಗೇಟ್ ಬಳಿ "ಲವ್ ಯೂ ರಚ್ಚು" ಸಿನಿಮಾದ ಸಾಹಸ ದೃಶ್ಯಗಳ ಚಿತ್ರೀಕರಣ ಬರದಿಂದ ಸಾಗಿದೆ. ಲವ್ ಯೂ ರಚ್ಚು ಚಿತ್ರದ ಮೊದಲ ಹಂತದ ಚಿತ್ರೀಕರಣದ ವೇಳೆ ಅವಘಡ ನಡೆದ ಕಾರಣ ಚಿತ್ರದ ಚಿತ್ರೀಕರಣವನ್ನ ನಿಲ್ಲಿಸಲಾಗಿತ್ತು. ಈಗ ಎರಡನೇ ಮತ್ತು ಕೊನೆಯ ಹಂತದ ಶೂಟಿಂಗ್ ಆರಂಭವಾಗಿದೆ.
ನಾಯಕ ನಟ ಅಜಯ್ ರಾವ್, ಡಿಂಪಲ್ ಕ್ವೀನ್ ರಚಿತಾ ರಾಮ್ ನಟನೆಯ ಲವ್ ಯೂ ರಚ್ಚು ಸಿನಿಮಾ ಇದಾಗಿದ್ದು, ಗುರು ದೇಶಪಾಂಡೆ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. ಇಂದು ಕೊನೆಯ ಹಂತದ ಚಿತ್ರಿಕರಣದಲದಲ್ಲಿ ಸಾಹಸ ನಿರ್ದೇಶಕ ಅರ್ಜುನ್ ಅವರ ನಿರ್ದೇಶನದಲ್ಲಿ ಕೆಲವು ಸಾಹಸ ಸನ್ನಿವೇಶದ ದೃಶ್ಯಗಳನ್ನು ಚಿತ್ರಿಕರೀಸಲಾಯಿತು. ಕಳೆದ ಮೂರು ದಿನಗಳಿಂದ ಈ ಸಾಹಸ ದೃಶ್ಯದ ಚಿತ್ರೀಕರಣ ನಡೆಯುತ್ತಿದ್ದು, ಇಂದು ಕೊನೆಯ ದಿನದ ಚಿತ್ರೀಕರಣ ನಡೆಯಿತು.
ಈ ಹಿಂದೆ ಚಿತ್ರೀಕರಣ ಸಂದರ್ಭದಲ್ಲಿ ಹೈಟೆನ್ಷನ್ ತಂತಿ ತಗುಲಿ ಫೈಟರ್ ವಿವೇಕ್ ಸಾವನ್ನಪ್ಪಿದ್ದರು. ಈ ಬಾರಿ ಯಾವುದೇ ಅವಘಡ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಹಾಗೂ ಎಲ್ಲಾ ಫೈಟರ್ ಗಳಿಗೆ ಜೀವವಿಮೆ ಮಾಡಿಸಲಾಗಿದೆ. ರಾಜ್ಯ ಸರ್ಕಾರ ಹಾಗೂ ವಾಣಿಜ್ಯ ಮಂಡಳಿ ನೀಡಿರುವ ಕ್ರಮಗಳನ್ನು ಚಾಚೂ ತಪ್ಪದೇ ಪಾಲಿಸಲಾಗಿದೆ ಎಂದು ಚಿತ್ರ ತಂಡದವರು ತಿಳಿಸಿದ್ದಾರೆ.