ಸ್ಯಾಂಡಲ್ವುಡ್ ಕೃಷ್ಣ ಅಜಯ್ ರಾವ್ ನಟಿಸಿರುವ 'ಕೃಷ್ಣ ಟಾಕೀಸ್' ಚಿತ್ರಕ್ಕೆ ಸೆನ್ಸಾರ್ ಆಗಿದ್ದು, ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದೆ. ಲಾಕ್ ಡೌನ್ ಇದ್ದ ಕಾರಣ ಕಳೆದ ಮೂರು ತಿಂಗಳಿಂದ ಸೆನ್ಸಾರ್ ಮಂಡಳಿ ಈ ಚಿತ್ರ ನೋಡಲು ಸಾಧ್ಯವಾಗಿರಲಿಲ್ಲ.

ಕಾಕತಾಳೀಯ ಎಂಬಂತೆ ಶ್ರೀ ಕೃಷ್ಣ ಜನ್ಮಾಷ್ಠಮಿ ದಿನವೇ ಸೆನ್ಸಾರ್ ಮಂಡಳಿ 'ಕೃಷ್ಣ ಟಾಕೀಸ್' ಚಿತ್ರ ನೋಡಿ ಥಿಯೇಟರ್ಗೆ ಬರಲು ಅಸ್ತು ಎಂದಿದೆ. ಗೋಕುಲ್ ಎಂಟರ್ಟೈನರ್ ಲಾಂಛನದಲ್ಲಿ ಗೋವಿಂದ ರಾಜು ಎ.ಹೆಚ್ ನಿರ್ಮಿಸಿರುವ ಈ ಚಿತ್ರದ ಟೀಸರ್ ಹಾಗೂ ಲಿರಿಕಲ್ ವಿಡಿಯೋಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ವಿಜಯಾನಂದ್ ನಿರ್ದೇಶನದ ಈ ಚಿತ್ರಕ್ಕೆ ಶ್ರೀಧರ್ ವಿ. ಸಂಭ್ರಮ್ ಸಂಗೀತ ನೀಡಿದ್ದಾರೆ. ಅಭಿಷೇಕ್ ಕಾಸರಗೋಡು ಛಾಯಾಗ್ರಹಣ 'ಕೃಷ್ಣ ಟಾಕೀಸ್'ಗಿದೆ.

ಲವರ್ ಬಾಯ್ ಪಾತ್ರದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಅಜಯ್ ರಾವ್ ಮೊದಲ ಬಾರಿಗೆ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರದಲ್ಲಿ ನಟಿಸಿದ್ದಾರೆ. ಅಪೂರ್ವ, ಸಿಂಧು ಲೋಕನಾಥ್, ಚಿಕ್ಕಣ್ಣ, ಮಂಡ್ಯ ರಮೇಶ್, ಶೋಭ್ ರಾಜ್, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮ್ಮಿನಾಡು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಸರ್ಕಾರ ಸಿನಿಮಾ ಮಂದಿರಗಳ ಆರಂಭಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ಕೂಡಲೆ ಕೃಷ್ಣ, ಥಿಯೇಟರ್ಗಳಲ್ಲಿ ಪ್ರತ್ಯಕ್ಷ ಆಗಲಿದ್ದಾನೆ.
