ಕಳೆದ ವರ್ಷ ದೇಶಾದ್ಯಂತ ಸುದ್ದಿ ಮಾಡಿದ್ದ ವಿಷಯ ಎಂದರೆ ಮಿ ಟೂ ಅಭಿಯಾನ ಆರಂಭವಾಗಿದ್ದೇ ತಡ ಚಿತ್ರರಂಗದ ಸಾಕಷ್ಟು ಹೆಣ್ಣು ಮಕ್ಕಳು ತಮಗಾದ ಶೋಷಣೆ ವಿರುದ್ಧ ದನಿಯೆತ್ತಿದ್ದರು. ಅದರಲ್ಲಿ ದೊಡ್ಡ ಹೆಸರು ಮಾಡಿದ್ದ ನಿರ್ದೇಶಕ, ನಟ, ನಿರ್ಮಾಪಕರ ಕಡೆ ಬೆರಳು ತೋರಲಾಗಿತ್ತು.
ಸದ್ಯಕ್ಕೆ ಮಿ ಟೂ ಕಾವು ಕಡಿಮೆಯಾಗಿದ್ದರೂ ಇನ್ನೂ ಹೊಗೆಯಾಡುತ್ತಿದೆ. ಇತ್ತೀಚೆಗೆ ತೆಲುಗು ಚಿತ್ರರಂಗ ಟಾಲಿವುಡ್ ಮಹಿಳೆಯರ ಮೇಲೆ ಉಂಟಾಗುವ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ವಿಶೇಷ ಕಮಿಟಿಯೊಂದನ್ನು ಸ್ಥಾಪಿಸಿತ್ತು. ಖ್ಯಾತನಾಮರಾದ ನಂದಿನಿ ರೆಡ್ಡಿ, ಪರುಚುರಿ ಗೋಪಾಲಕೃಷ್ಣ, ಸುಪ್ರಿಯ, ಝಾನ್ಸಿ ಅವರನ್ನು ಈ ಕಮಿಟಿಯ ಸದಸ್ಯರನ್ನಾಗಿ ನೇಮಿಸಲಾಗಿತ್ತು.
ಇದೀಗ ತಮಿಳು ಚಿತ್ರರಂಗ ಕೂಡಾ ಇದೇ ಹಾದಿಯಲ್ಲಿ ಹೆಜ್ಜೆಯಿರಿಸಿದೆ. ಕಾಲಿವುಡ್ ಚಲನಚಿತ್ರ ಸಂಘವಾದ ನಡಿಗರ್ ಸಂಘಂ ಮಿ ಟೂ ಕೇಸ್ಗಳನ್ನು ಹ್ಯಾಂಡಲ್ ಮಾಡಲೆಂದೇ ವಿಶೇಷ ನಕಮಿಟಿಯೊಂದನ್ನು ಸ್ಥಾಪಿಸಿದೆ. ಹಿರಿಯ ನಟರಾದ ನಾಸರ್, ಸುಹಾಸಿನಿ, ಖುಷ್ಬೂ, ರೋಹಿಣಿ, ಕಾರ್ತಿ, ವಿಶಾಲ್ ಹಾಗೂ ಮುರುಗನ್ ಈ ಪ್ಯಾನಲ್ನ ಸದಸ್ಯರಾಗಿ ನೇಮಕವಾಗಿದ್ದಾರೆ. ಮುಂದಿನ ದಿನಗಳಲ್ಲಿ ಈ ಕಮಿಟಿ ಹೇಗೆ ಕೆಲಸ ಮಾಡುವುದು ಕಾದು ನೋಡಬೇಕಿದೆ.