ಬೆಂಗಳೂರು: ನೆರೆ ಬಾಧಿತ ಉತ್ತರ ಕರ್ನಾಟಕಕ್ಕೆ ಪರಿಹಾರ ನೀಡಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದಾಗಿದ್ದು, ಆಗಸ್ಟ್ 16 ರಂದು ಪರಿಹಾರ ನಿಧಿ ಘೋಷಿಸಲು ತೀರ್ಮಾನಿಸಿದ್ದಾರೆ.
ವಾಣಿಜ್ಯ ಮಂಡಳಿ ನೆರೆ ಪರಿಹಾರ ಘೋಷಣೆಗೆ ಇಷ್ಟೊಂದು ಸಮಯ ಯಾಕೆ ತೆಗೆದುಕೊಳ್ಳುತ್ತಿದೆ. ಇಂತಹುದಕ್ಕೆ ಮೀಟಿಂಗ್ ಮಾಡಿ ಘೋಷಣೆ ಮಾಡಬೇಕಾ, ಎಲ್ಲ ಸದಸ್ಯರು ಸಹಕರಿಸುತ್ತಿಲ್ಲವಾ? ಎನ್ನುವ ಪ್ರಶ್ನೆಗಳು ಸದ್ಯ ಹುಟ್ಟಿಕೊಂಡಿವೆ. ಅದಕ್ಕೆ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್ ನೀಡುತ್ತಾರೆ ಉತ್ತರ ನೀಡಿದ್ದಾರೆ.
ಏನಿದು ಕಾರಣ?
ಕಳೆದ ಬಾರಿ ಕೊಡಗಿನಲ್ಲಿ ಸಂಭವಿಸಿದ್ದ ಪ್ರಕೃತಿ ವಿಕೋಪಕ್ಕ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ₹10 ಲಕ್ಷ ಘೋಷಣೆ ಮಾಡಿತು. ಆಮೇಲೆ ತುಮಕೂರಿನ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಸಿದ್ಧಗಂಗಾ ಮಠಕ್ಕೆ ₹5 ಲಕ್ಷ ನೀಡುವುದಾಗಿ ಘೋಷಣೆ ಆಗಿತ್ತು. ಆದರೆ, ಇವುಗಳಿಗೆ ಚಕಾರ ಎತ್ತಿ ವಾಣಿಜ್ಯ ಮಂಡಳಿ ಸದಸ್ಯನೋರ್ವ, ಹೀಗೆಲ್ಲಾ ವಾಣಿಜ್ಯ ಮಂಡಳಿ ಹಣ ಕೊಡುವುದಕ್ಕೆ ಬರುವುದಿಲ್ಲ ಎಂದು ಕೋರ್ಟಿನಲ್ಲಿ ಕೇಸ್ ಹಾಕಿದ್ದಾರಂತೆ. ಇದು ಈಗಿನ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ ಅವರ ಕೈ ಕಟ್ಟಿ ಹಾಕಿದೆ. ಅದಕ್ಕಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು ಕಾನೂನು ಸಲಹೆ ಪಡೆದು ಆಗಸ್ಟ್ 16 ರಂದು ಪರಿಹಾರ ನಿಧಿ ಘೋಷಿಸಲು ತೀರ್ಮಾನಿಸಿದ್ದಾರೆ.
ಅದೇ ಸಭೆಯಲ್ಲಿ ಕಲಾವಿದರುಗಳ ಜೊತೆ ಸೇರಿಕೊಂಡು ಮತ್ತಷ್ಟು ಹಣ ಸಂಗ್ರಹಿಸಿ, ನೀಡಬೇಕೆಂದು ಸಹ ತೀರ್ಮಾನ ತೆಗೆದುಕೊಳ್ಳಲಾಗುವುದು. ಅಂದಹಾಗೆ ಕಲಾವಿದರ ಸಂಘ ಆಗಲಿ, ನಿರ್ಮಾಪಕರ ಸಂಘ ಆಗಲಿ, ನಿರ್ದೇಶಕರ ಸಂಘ ಆಗಲಿ ಯಾವುದೇ ತೀರ್ಮಾನವನ್ನು ಇನ್ನೂ ಕೈಗೊಂಡಿಲ್ಲ. ಆದರೆ, ಕೆಲವು ಕಲಾವಿದರುಗಳು ಈ ವಿಚಾರದಲ್ಲಿ ಸ್ವತಂತ್ರವಾಗಿ ಮುಂದಾಗಿ ಸಹಾಯ ಹಸ್ತ ಚಾಚಿದ್ದಾರೆ.