ಸೆಪ್ಟೆಂಬರ್ 14 ದೇಶದಲ್ಲಿ ಹಿಂದಿ ದಿವಸವಾಗಿ ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಕೇಂದ್ರ ಸರ್ಕಾರ ಈಗಾಗಲೇ ರಾಜ್ಯದಲ್ಲಿ ಹಿಂದಿ ಹೇರಿಕೆ ಮಾಡುತ್ತಿದ್ದು ಇದರ ಬಗ್ಗೆ ವಿರೋಧ ವ್ಯಕ್ತವಾಗುತ್ತಿದೆ. ಇದೀಗ ಈ ಹಿಂದಿ ದಿವಸ್ ಅಂಗವಾಗಿ ಬಹುಭಾಷಾ ನಟ ಪ್ರಕಾಶ್ ರೈ, ಡಾಲಿ ಧನಂಜಯ್, ನಟ ಮತ್ತು ಸಾಮಾಜಿಕ ಹೋರಾಟಗಾರ ಚೇತನ್ ಪ್ರತಿಕ್ರಿಯಿಸಿದ್ದಾರೆ.
ಕನ್ನಡ ಮಾತ್ರವಲ್ಲದೆ ಇತರ ಭಾಷೆಗಳಲ್ಲಿ ಕೂಡಾ ಗುರುತಿಸಿಕೊಂಡಿರುವ ಪ್ರಕಾಶ್ ರೈ, ನನಗೆ ಕನ್ನಡದ ಜೊತೆಗೆ ಇತರ ಭಾಷೆಗಳು ಕೂಡಾ ಗೊತ್ತು. ಆದರೆ ನನ್ನ ಕಲಿಕೆ, ನನ್ನ ಗ್ರಹಿಕೆ, ನನ್ನ ಬೇರು, ನನ್ನ ಶಕ್ತಿ, ನನ್ನ ಹೆಮ್ಮೆ, ನಮ್ಮ ಭಾಷೆ ಕನ್ನಡ ಎಂದು ಹೇಳಿದ್ದಾರೆ. 'ನನಗೆ ಹಿಂದಿ ಬರೋಲ್ಲ ಹೋಗ್ರಪ್ಪ' ಎಂಬ ಕನ್ನಡ ಪದ ಇರುವ ಟೀ ಶರ್ಟ್ನ್ನು ಧರಿಸಿ, ಹಿಂದಿ ಹೇರಿಕೆಯನ್ನು ವಿರೋಧಿಸಿದ್ದಾರೆ.
ಮೊದಲಿಂದಲೂ ಹಿಂದಿ ಹೇರಿಕೆಯನ್ನು ವಿರೋಧಿಸುತ್ತಾ ಬಂದಿರುವ ಆ ದಿನಗಳು ಚೇತನ್ ಕೂಡಾ ಹಿಂದಿ ದಿವಸ್ ವಿರುದ್ಧವಾಗಿ ಪ್ರತಿಕ್ರಿಯಿಸಿದ್ದಾರೆ. 'ಹಿಂದಿ ಗೊತ್ತಿಲ್ಲ ಹೋಗೋ ನಾನು ಕನ್ನಡಿಗ' ಎಂಬ ಪದವನ್ನು ಹೊಂದಿರುವ ಟೀ ಶರ್ಟ್ ಧರಿಸುವ ಮೂಲಕ ಚೇತನ್ ಹಿಂದಿ ಹೇರಿಕೆಯನ್ನು ಖಂಡಿಸಿದ್ದಾರೆ.
ಇನ್ನು ಡಾಲಿ ಧನಂಜಯ್ ಕೂಡಾ ನನ್ನ ದೇಶ ಭಾರತ, ನನ್ನ ಬೇರು ಕನ್ನಡ, ನಾನು ಎಲ್ಲಾ ಭಾಷೆಯನ್ನು ಗೌರವಿಸುತ್ತೇನೆ, ಆದರೆ ನನ್ನ ಭಾಷೆಯನ್ನು ಹೆಚ್ಚು ಪ್ರೀತಿಸುತ್ತೇನೆ ಎಂದು ಕನ್ನಡದ ಮೇಲೆ ಅಭಿಮಾನ ತೋರಿದ್ದಾರೆ. ಅಲ್ಲದೆ 'ನನ್ನ ದೇಶ ಭಾರತ, ನನ್ನ ಬೇರು ಕನ್ನಡ' ಎಂಬ ಟೀ ಶರ್ಟ್ ಧರಿಸಿ ಕನ್ನಡ ಪ್ರೇಮ ಮೆರೆದಿದ್ದಾರೆ.