2020 ಕೊರೊನಾ ಎಂಬ ಮಹಾಮಾರಿ ಇಡೀ ವಿಶ್ವವನ್ನೇ ಕಂಟಕವಾಗಿ ಕಾಡಿದ ವರ್ಷ. ಈಗಾಗಲೇ ಈ ಮಹಾಮಾರಿ ವೈರಸ್‌ನಿಂದ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದಾರೆ. ಅಷ್ಟೇ ಅಲ್ಲ ಕೋಟ್ಯಂತ ಜನರ ಬದುಕನ್ನ ಕಸಿದಕೊಂಡ ವರ್ಷ. ಇದರಲ್ಲಿ ಕನ್ನಡ ಚಿತ್ರರಂಗ ಕೂಡ ಹೊರತಾಗಿಲ್ಲ. ಈ 2020ರಲ್ಲಿ ಕನ್ನಡ ಚಿತ್ರರಂಗದ ಪ್ರಖ್ಯಾತ ತಾರೆಯರು ಬದುಕಿನ ಪಯಣ ಮುಗಿಸಿದ್ದು, ಸಾಕಷ್ಟು ನೋವು ತಂದಿತ್ತು.
ಹಾಗಾದರೆ 2020ರಲ್ಲಿ ಕನ್ನಡ ಚಿತ್ರರಂಗದ ಯಾರೆಲ್ಲಾ ತಾರೆಯರು ಅಗಲಿದರು ಎಂಬುದರ ಚಿತ್ರಣ ಇಲ್ಲಿದೆ.
ಕಿಶೋರಿ ಬಲ್ಲಾಳ್
ಈ ಕೊರೊನಾ ಎಂಬ ಹೆಮ್ಮಾರಿ ಬರುವುದಕ್ಕಿಂತ ಮುಂಚೆ ಕನ್ನಡ ಚಿತ್ರರಂಗದಲ್ಲಿ ಇಹಲೋಕ ತ್ಯಜಿಸಿದ ಪ್ರಖ್ಯಾತ ನಟಿ ಅಂದರೆ ಕಿಶೋರಿ ಬಲ್ಲಾಳ್. ಬಾಲಿವುಡ್, ಕನ್ನಡ ಮರಾಠಿ ಸೇರಿದಂತೆ ಬರೋಬ್ಬರಿ 75 ಚಿತ್ರಗಳಲ್ಲಿ ನಟಿಸಿದ್ದ ಈ ರಂಗ ಭೂಮಿ ಕಲಾವಿದೆ ಫೆಬ್ರವರಿ 18ರಂದು, 82ನೇ ವಯಸ್ಸಿನಲ್ಲಿ ವಯೋಸಹಜ ಕಾಯಿಲೆಯಿಂದ ಇಹಲೋಕ ತ್ಯಜಿಸಿದರು. ಹಿಂದಿಯ ಸ್ವದೇಸ್ ಸಿನಿಮಾದಲ್ಲಿ ಗಮನಾರ್ಹ ಪಾತ್ರ ಮಾಡಿದ್ದ ಕಿಶೋರಿ ಬಲ್ಲಾಳ್, ನಿಧನಕ್ಕೆ ಬಾಲಿವುಡ್ ಬಾದಾಷಾ ಶಾರುಖ್ ಖಾನ್ ಸೇರಿದಂತೆ ಅನೇಕರು ಕಿಶೋರಿ ಬಲ್ಲಾಳ್ ಸಾವಿಗೆ ಸಂತಾಪ ಸೂಚಿಸಿದ್ದರು.
ಬುಲೆಟ್ ಪ್ರಕಾಶ್
ಇನ್ನು ಕರ್ನಾಟದಲ್ಲಿ ಕೊರೊನಾ ಎಂಬ ಹೆಮ್ಮಾರಿ ವಕ್ಕರಿಸಿ ತಾಂಡವಾಡುತ್ತಿದ್ದ ಸಂದರ್ಭದಲ್ಲಿ ಕೊನೆಯುಸಿರೆಳೆದ ನಟ ಕಮ್ ರಾಜಕಾರಣಿ ಬುಲೆಟ್ ಪ್ರಕಾಶ್. ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆ ಹಾಸ್ಯ ನಟನಾಗಿದ್ದ ಬುಲೆಟ್ ಪ್ರಕಾಶ್ ಸಾವಿನ ಸುದ್ದಿ ಚಿತ್ರರಂಗ ಶಾಕ್ಗೆ ಒಳಗಾಗುವಂತೆ ಮಾಡಿತ್ತು. ಲಿವರ್ ಮತ್ತು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಬುಲೆಟ್ ಪ್ರಕಾಶ್ ಮಾರ್ಚ್ 31ರಂದು ಚಿಕಿತ್ಸೆ ಫಲಕಾರಿಯಾಗದೇ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು, ಎಕೆ 47, ಪಾರ್ಥ,ಓಂಕಾರ, ಅಂಬಿ, ಮಸ್ತ್ ಮಜಾ ಮಾಡಿ, ಐತಲಕ್ಕಡಿ ಜಾಕಿ,ರಜನಿಕಾಂತ, ಗಂಗಾ,ಸಾಹೇಬ,ರೋಜ್ ಸೇರಿದಂತೆ ಕನ್ನಡದಲ್ಲೂ 323ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬುಲೆಟ್ ಪ್ರಕಾಶ್ ನಟಿಸಿ ಪ್ರೇಕ್ಷಕರನ್ನ ರಂಜಿಸಿದರು.
ಮೈಕಲ್ ಮಧು
ಬುಲೆಟ್ ಪ್ರಕಾಶ್ ಸಾವನ್ನಪ್ಪಿ 20 ದಿನಕ್ಕೆ ನಿಧನರಾದ ಮತ್ತೊಬ್ಬ ಹಾಸ್ಯ ನಟ ಅಂದರೆ ಮೈಕೆಲ್ ಮಧು. ಮೇ 13ರಂದು ಅನಾರೋಗ್ಯದಿಂದಾಗಿ ಮೈಕಲ್ ಮಧು ಹೃದಯಘಾತದಿಂದ ನಿಧನರಾದರು. ಶಿವರಾಜ್‌ಕುಮಾರ್ ನಟನೆಯ ಓಂ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ನಟರಾಗಿ ಎಂಟ್ರಿ ಪಡೆದ ಮೈಕೆಲ್, ಸೂರ್ಯವಂಶ, ಶ್, ಎ ಸೇರಿದಂತೆ ಸುಮಾರು 80ಕ್ಕೂ ಅಧಿಕ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ಇವರು ಕೊನೆಯದಾಗಿ ನಟಿಸಿದ ಸಿನಿಮಾ 2020ರಲ್ಲಿ ತೆರೆಕಂಡ ಫ್ರೆಂಚ್ ಬಿರಿಯಾನಿ ಸಿನಿಮಾ.
ಚಿರಂಜೀವಿ ಸರ್ಜಾ
ಈ ಬೇಡಿಕೆ ಹಾಸ್ಯ ನಟರ ಸಾವಿನ ಬೆನ್ನಲ್ಲೇ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ದೊಡ್ಡ ಆಘಾತ ಕಾದಿತ್ತು. ಅದುವೇ ಯುವ ಸಾಮ್ರಾಟ್ ಆಗಿ ಮಿಂಚುತ್ತಿದ್ದ ಚಿರಂಜೀವಿ ಸರ್ಜಾ ಅಕಾಲಿಕ ಮರಣ, ಕನ್ನಡ ಚಿತ್ರರಂಗ ಅಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯರಿಗೆ ಶಾಕಿಂಗ್ ನ್ಯೂಸ್ ಆಗಿತ್ತು. 39ನೇ ವಯಸ್ಸಿಗೆ ಜೂನ್ 7ರಂದು ಹೃದಯಾಘಾತದಿಂದ ಚಿರಂಜೀವಿ ಕೊನೆಯುಸಿರೆಳೆದರು ಎಂಬ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿತ್ತು. ಅಭಿಮಾನಿಗಳು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ತುಂಬು ಗರ್ಭಿಣಿಯಾಗಿದ್ದ ಪತ್ನಿ ಮೇಘನಾ ಪತಿಯ ಪಾರ್ಥೀವ ಶರೀರ ತಬ್ಬಿ ಕಣ್ಣೀರಿಟ್ಟಿದ್ದ ದೃಶ್ಯ ಇಂದಿಗೂ ಮರೆಯಲು ಸಾಧ್ಯವಿಲ್ಲ. ಚಿರು ಮೂಲಕ ಸ್ಯಾಂಡಲ್ ವುಡ್ಗೆ ಪದಾರ್ಪಣೆ ಮಾಡಿದ್ದ ಚಿರು ಬಳಿಕ, ಕೆಂಪೇಗೌಡ, ಆಟಗಾರ, ವರಧನಾಯಕ, ಅಮ್ಮ ಐಲ್ ಯೂ, ಸಿಂಗ ಹೀಗೆ 25ಕ್ಕೂ ಹಲವಾರು ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದ ಚಿರಂಜೀವಿ ಸರ್ಜಾ ನೆನಪು ಮಾತ್ರ. ಆದರೆ, ಪತ್ನಿಯ ಹೊಟ್ಟೆಯಲ್ಲಿ ಮತ್ತೆ ಹುಟ್ಟಿ ಬಂದಿದ್ದಾನೆ ಎಂಬ ಸಮಾಧಾನವಿದೆ.
ಮಿಮಿಕ್ರಿ ರಾಜಗೋಪಾಲ್
ಇವರ ನಂತರ ಮತ್ತೊಬ್ಬ ಕನ್ನಡದ ನಟ ಸಾವನ್ನಪ್ಪಿದರು. ಅವರೇ ನಾಟಕ, ವೇದಿಕೆ ಹಾಗೂ ಸಿನಿಮಾಗಳಲ್ಲಿ ತನ್ನ ನಟನೆಯಿಂದಲೇ ಸಿನಿಮಾ ಪ್ರೇಕ್ಷಕರ ಹೃದಯ ಗೆದ್ದಿದ್ದ ಹಾಸ್ಯ ನಟ ಮಿಮಿಕ್ರಿ ರಾಜಗೋಪಾಲ್. ಕಿಡ್ನಿ ಮತ್ತು ಅಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದ ಹಾಸ್ಯ ನಟ ಮಿಮಿಕ್ರಿ ರಾಜಗೋಪಾಲ್ ಅವರು ಜುಲೈ 1ರಂದು ನಿಧನರಾದರು. ಅವರಿಗೆ 69 ವರ್ಷ ವಯಸ್ಸಾಗಿತ್ತು. 650ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಮಿಮಿಕ್ರಿ ರಾಜಗೋಪಾಲ್ ನಟಿಸಿ ಸೈ ಎನ್ನಿಸಿಕೊಂಡಿದ್ದರು.
ಶಾಂತಮ್ಮ
ಹಿರಿಯ ನಟಿ ಕಿಶೋರಿ ಬಲ್ಲಾಳ್ ಬಳಿಕ ಮತ್ತೊರ್ವ ಹಿರಿಯ ಹಾಗೂ ಪೋಷಕ ನಟಿ ಶಾಂತಮ್ಮ ಜುಲೈ 19ರಂದು ನಿಧನರಾದರು. ಶಾಂತಮ್ಮಗೆ 94 ವರ್ಷ ವಯಸ್ಸಾಗಿತ್ತು. ಕನ್ನಡ, ಹಿಂದಿ, ತಮಿಳು ಸೇರಿದಂತೆ ವಿವಿಧ ಭಾಷೆಗಳಲ್ಲಿ ಸುಮಾರು 400ಕ್ಕೂ ಅಧಿಕ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು ಶಾಂತಮ್ಮ.
ರಾಕ್ ಲೈನ್ ಸುಧಾಕರ್
ಇದಾದ ನಂತ್ರ ಸಾವನ್ನಪ್ಪಿದ್ದು ಕನ್ನಡ ಚಿತ್ರರಂಗದಲ್ಲಿ ಕೋಟಿ ನಿರ್ಮಾಪಕ ಅಂತಾ ಕರೆಯಿಸಿಕೊಂಡಿರುವ ರಾಕ್ ಲೈನ್ ವೆಂಕಟೇಶ್, ಆಪ್ತ ಅಂತಾನೇ ಗುರುತಿಸಿಕೊಂಡಿದ್ದ ಪೋಷಕ ನಟ ರಾಕ್ ಲೈನ್ ಸುಧಾಕರ್. ಯೋಗರಾಜ್ ಭಟ್ ನಿರ್ದೇಶನದ ಪಂಚರಂಗಿ ಚಿತ್ರದ ಮೂಲಕ ಖ್ಯಾತಿ ಪಡೆದ ನಟ ರಾಕ್‌ಲೈನ್ ಸುಧಾಕರ್ ಸೆಪ್ಟಂಬರ್ 24ರಂದು ಇಹಲೋಕ ತ್ಯಜಿಸಿದರು. ಶುಗರ್‌ಲೆಸ್ ಸಿನಿಮಾದ ಶೂಟಿಂಗ್‌ನಲ್ಲಿ ಭಾಗವಹಿಸಿದ್ದ ಸುಧಾಕರ್, ಮೇಕಪ್ ಹಚ್ಚಿಕೊಂಡಿರುವಾಗಲೇ ಹೃದಯಾಘಾತದಿಂದ ನಿಧನರಾಗಿದ್ದರು. ಪಂಚರಂಗಿ, ಟೋಪಿವಾಲಾ, ಜೂಮ್, ಚಮಕ್, ಪಟಾಕಿ, ರಾಜಕುಮಾರ ಸೇರಿದಂತೆ 10 ವರ್ಷಗಳಲ್ಲಿ 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದರು.
ಸಂಗೀತ ನಿರ್ದೇಶಕ ರಾಜನ್
ಈ ಕೊರೊನಾ ಟೈಮಲ್ಲಿ ಕನ್ನಡದ ಹಿರಿಯ ಸಂಗೀತ ನಿರ್ದೇಶಕ ರಾಜನ್ ಕೂಡ ತಮ್ಮ ಬದುಕಿನ ಪಯನ ಮುಗಿಸಿದರು. ಅಕ್ಟೋಬರ್ 11ರಂದು ಹೃದಯಾಘಾತದಿಂದ ರಾಜನ್ ನಿಧನರಾದರು. ಸಹೋದರ ನಾಗೇಂದ್ರ ಅವರ ಜೊತೆ ಸೇರಿ, ರಾಜನ್ - ನಾಗೇಂದ್ರ ಹೆಸರಿನಲ್ಲಿ ಸುಮಾರು 375ಕ್ಕೂ ಅಧಿಕ ಸಿನಿಮಾಗಳಿಗೆ ಸಂಗೀತ ನೀಡಿದ್ದರು. ಅವರು. ಡಾ. ರಾಜ್‌ಕುಮಾರ್, ವಿಷ್ಣುವರ್ಧನ್ ಅವರ ಬಹುತೇಕ ಸಿನಿಮಾಗಳಿಗೆ ಅವರು ಸಂಗೀತ ಸಂಯೋಜಿಸಿದ್ದರು.
ಹೆಚ್.ಜಿ. ಸೋಮಶೇಖರ ರಾವ್
ಇನ್ನು ಸಿನಿಮಾ ಹಾಗೂ ರಂಗಭೂಮಿ ಕ್ಷೇತ್ರದಕ್ಕೆ ತನ್ನದೇ ಸೇವೆ ಸಲ್ಲಿಸಿದ್ದ ಹಿರಿಯ ನಟ ದತ್ತಣ್ಣ ಅವ್ರ ಸಹೋದರ ಹೆಚ್.ಜಿ. ಸೋಮಶೇಖರ ರಾವ್ ಅವರು ನವೆಂಬರ್ 3ರಂದು ನಿಧನರಾದರು. 86 ವರ್ಷದ ಸೋಮಣ್ಣ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಸಾಹಿತ್ಯ, ರಂಗಭೂಮಿ, ಚಲನಚಿತ್ರ ಮತ್ತು ಕಿರುತೆರೆ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದರು.
ನಿರ್ದೇಶಕ ಭರತ್
ಈ 2020ರ ಕೊನೆಯ ತಿಂಗಳಲ್ಲಿ ನಿರ್ದೇಶಕ ಭರತ್ ಡಿಸೆಂಬರ್ 25ರಂದು ಅನಾರೋಗ್ಯದಿಂದ ಇಹಲೋಕ ತ್ಯಜಿಸಿದರು. ಇವರು ಶ್ರೀಮುರಳಿ ಅಭಿನಯದ ಕಂಠಿ ಸಿನಿಮಾಕ್ಕೆ ನಿರ್ದೇಶನ ಮಾಡಿದರು.