ಹೆಚ್ಚುತ್ತಿರುವ ಕನ್ನಡ ಸಿನಿಮಾಗಳ ಸೆನ್ಸಾರ್ ವಿಳಂಬ ಬಗೆಹರಿಸಲು ಫಿಲ್ಮ್ ಚೇಂಬರ್ ಅಧ್ಯಕ್ಷ ಗುಬ್ಬಿ ಜಯರಾಜ್ ಹಾಗೂ ಉಪಾಧ್ಯಕ್ಷ ಉಮೇಶ್ ಬಣಕಾರ್, ಕರ್ನಾಟಕ ಪ್ರಾದೇಶಿಕ ಸಂಸ್ಥೆಗೆ ಮತ್ತೊಬ್ಬ ಸೆನ್ಸಾರ್ ಅಧಿಕಾರಿಯನ್ನ ಕೊಡುವಂತೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಈ ಮನವಿ ಮೇರೆಗೆ ಸಚಿವ ಪ್ರಕಾಶ್ ಜಾವಡೇಕರ್ ಕೂಡಲೇ ಮಧು ಆರ್ ಜೆ ಹಳ್ಳಿ ಎಂಬ ಮತ್ತೊಬ್ಬ ಅಧಿಕಾರಿಯನ್ನ ತಾತ್ಕಾಲಿಕವಾಗಿ ನೇಮಕ ಮಾಡಿದ್ದಾರೆ. ಈಗಾಗಲೇ ಸೆನ್ಸಾರ್ ಅಧಿಕಾರಿ ಮಧು ಸಿನಿಮಾಗಳನ್ನ ನೋಡ್ತಾ ಇದ್ದಾರೆ ಎಂದು, ಫಿಲ್ಮ್ ಚೇಂಬರ್ ಉಪಾಧ್ಯಕ್ಷ ಉಮೇಶ್ ಬಣಕಾರ್ ತಿಳಿಸಿದ್ದಾರೆ.
ಇಷ್ಟಕ್ಕೂ ಸಮಸ್ಯೆ ಏನು: ಸೆನ್ಸಾರ್ ಮಂಡಳಿ ಅಧಿಕಾರಿ ಶ್ರೀನಿವಾಸ್ ದಿನಕ್ಕೆ ನಾಲ್ಕರಿಂದ ಐದು ಸಿನಿಮಾ ನೋಡೊದು ಕಷ್ಟ ಆಗಿದೆಯಂತೆ. ಹೊಸಬರು ಹಾಗೂ ಸ್ಟಾರ್ ನಟರ ಸಿನಿಮಾಗಳು ಸೇರಿದಂತೆ 120ಕ್ಕೂ ಅಧಿಕ ಚಿತ್ರಗಳು ಸೆನ್ಸಾರ್ಗಾಗಿ ಕಚೇರಿ ಟೇಬಲ್ ನಲ್ಲಿವೆ. ಇದರಿಂದ ಕೋಟಿ ಕೋಟಿ ಹಣ ಹಾಕಿರುವ ನಿರ್ಮಾಪಕನಿಗೆ ನಷ್ಟ ಆಗುತ್ತಿದೆ. ಇದರಿಂದ ಬೇಸತ್ತ ಫಿಲ್ಮ್ ಚೇಂಬರ್ ಮುಖ್ಯಸ್ಥರು, ಸದ್ಯಕ್ಕೆ ತಾತ್ಕಾಲಿಕವಾಗಿ ಹೊಸ ಅಧಿಕಾರಿ ನೇಮಕ ಮಾಡಿದ್ದಾರೆ. ಇದರಿಂದ ಸದ್ಯದ ಮಟ್ಟಿಗೆ ನಿಟ್ಟುಸಿರು ಬಿಟ್ಟಿದ್ದಾರೆ. ಸದ್ಯ ಈಗಲಾದ್ರೂ ಸೆನ್ಸಾರ್ ಮಂಡಳಿಯ ಟೇಬಲ್ ನಲ್ಲಿರುವ, 120 ಸಿನಿಮಾಗಳು ಸೆನ್ಸಾರ್ ಆಗುವ ಮೂಲಕ ನಿರ್ಮಾಪಕರ ಸಮಸ್ಯೆಗೆ ಪರಿಹಾರ ಸಿಗಲಿದೆಯಾ ಅನ್ನೋದನ್ನ ಕಾದು ನೋಡಬೇಕು.