ಹರಿವು ಹಾಗು ನಾತಿಚರಾಮಿ ಸಿನಿಮಾಗಳ ಮೂಲಕ, ಸ್ಯಾಂಡಲ್ವುಡ್ನಲ್ಲಿ ಗಮನ ಸೆಳೆದ ನಿರ್ದೇಶಕ ಮಂಸೋರೆ ಈಗ ಮತ್ತೊಂದು ವಿಭಿನ್ನ ಕಾನ್ಸೆಪ್ಟ್ ಮೂಲಕ ಬಂದಿದ್ದು, ಅವರ ಚಿತ್ರದ ಪೋಸ್ಟರ್ ಗಮನ ಸೆಳೆಯುತ್ತಿದೆ.
ಈ ಬಾರಿ ರೈತರಿಗೆ ನಡೆಯುತ್ತಿರುವ ಅನ್ಯಾಯದ ಬಗ್ಗೆ ಚಿತ್ರ ಕತೆ ಸಿದ್ಧಪಡಿಸಿಕೊಂಡಿದ್ದು, ಆಕ್ಟ್-1978 ಎಂಬ ಟೈಟಲ್ ಇಟ್ಟು ಪೋಸ್ಟರ್ ಬಿಡುಗಡೆ ಮಾಡಿದ್ದು, ಚಂದನವನದಲ್ಲಿ ಸದ್ದು ಮಾಡುತ್ತಿದೆ. ಆಕ್ಟ್ 1978 ಚಿತ್ರದ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕಂಪ್ಲೀಟ್ ಮಾಡಿ ಈಗ ಇದೇ ನವೆಂಬರ್ ತಿಂಗಳಲ್ಲಿ ರಿಲೀಸ್ ಮಾಡೋದಿಕ್ಕೆ ಚಿತ್ರ ತಂಡ ಪ್ಲಾನ್ ಮಾಡಿದೆ.
ಯಜ್ಞ ಶೆಟ್ಟಿ ಅನ್ಯಾಯಕ್ಕೆ ಒಳಗಾಗಿರುವ ರೈತ ಮಹಿಳೆ ಪಾತ್ರವನ್ನ ಮಾಡುತ್ತಿದ್ದಾರೆ. ಈ ರೈತ ಮಹಿಳೆಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು, ಸರ್ಕಾರಿ ಅಧಿಕಾರಿಗಳು ಕೊಡದೆ ದೌರ್ಜನ್ಯ ಎಸಗಿದ್ದಾಗ, ಹೇಗೆ ಸಿಡಿದೆಳುತ್ತಾಳೆ ಎಂಬ ಪಾತ್ರವನ್ನ ಮಾಡಿದ್ದಾರೆ. ಸದ್ಯ ಈ ಆಕ್ಟ್ 1978 ಸಿನಿಮಾದ ಟ್ರೈಲರ್ ಅನ್ನು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಬಿಡುಗಡೆ ಮಾಡುವ ಮೂಲಕ, ಈ ಚಿತ್ರದ ವಿಭಿನ್ನ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನು ಪೊಲೀಸ್ ಅಧಿಕಾರಿಯಾಗಿ ಪ್ರಮೋದ್ ಶೆಟ್ಟಿ ಕಾಣಿಸಿಕೊಂಡಿದ್ರೆ, ಸರ್ಕಾರಿ ಅಧಿಕಾರಿಯ ಪಾತ್ರವನ್ನು ಶ್ರುತಿ ನಿರ್ವಹಿಸಿದ್ದಾರೆ. ಸಂಚಾರಿ ವಿಜಯ್ ಕೂಡ ಕಮಾಂಡರ್ ಪಾತ್ರದಲ್ಲಿ ಮಿಂಚಿದ್ದಾರೆ.
ನಿರ್ದೇಶಕ ಮಂಸೋರೆ ಹೇಳುವಂತೆ ಬಿ.ಸುರೇಶ್, ದತ್ತಣ್ಣ, ಅವಿನಾಶ್, ಶೋಭ ರಾಜ್, ಸೇರಿದಂತೆ ಸಾಕಷ್ಟು ಕಲಾವಿದರು ಈ ಚಿತ್ರದಲ್ಲಿದ್ದಾರೆ. ಸತ್ಯ ಹೆಗ್ಡೆ ಈ ಸಿನಿಮಾಕ್ಕೆ ಕ್ಯಾಮರಾ ವರ್ಕ್ ಮಾಡಿದ್ದು, ಸದ್ಯ ಅನಾವರಣ ಆಗಿರುವ ಆಕ್ಟ್ 1978 ಟ್ರೈಲರ್ ಹಲವಾರು ರೋಚಕ ಕಥೆಗಳನ್ನ ಹೇಳುತ್ತದೆ.
ರೋನಾಡ ಬಕ್ಕೇಶ್ ಹಾಗು ರಾಹುಲ್ ಶಿವಕುಮಾರ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಡಿ ಕ್ರಿಯೇಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಆಗಿರುವ ಆಕ್ಟ್ -1978 ಚಿತ್ರ ಇದೇ ತಿಂಗಳಲ್ಲಿ ಥಿಯೇಟರ್ನಲ್ಲಿ ರಿಲೀಸ್ ಆಗೋದಿಕ್ಕೆ ರೆಡಿಯಾಗಿದೆ. ಈ ಹೊಸ ಸಿನಿಮಾ ನೋಡಲು ಸಿನಿಮಾ ಪ್ರೇಕ್ಷಕರು ಚಿತ್ರಮಂದಿರಗಳ ಕಡೆ ಮುಖ ಮಾಡುವಂತೆ ಮಾಡುತ್ತಾ ಸದ್ಯದಲ್ಲೇ ಗೊತ್ತಾಗಲಿದೆ.