ಈ ಹಿಂದೆ ಅಂದರೆ 2000 ಇಸವಿ ಜುಲೈ 30ರ ಮಧ್ಯರಾತ್ರಿ ಡಾ. ರಾಜ್ಕುಮಾರ್ ಅಪಹರಣವಾದ ಸಂದರ್ಭದಲ್ಲಿ ಕನ್ನಡ ಚಿತ್ರೋದ್ಯಮ 108 ದಿನಗಳ ಕಾಲ ಯಾವುದೇ ಕಾರ್ಯ ಚಟುವಟಿಕೆಯಿಲ್ಲದೇ ಸಂಪೂರ್ಣ ಸ್ತಬ್ಧಗೊಂಡಿತ್ತು.
ಆದರೀಗ ಕೊರೊನಾ ವೈರಸ್ ಲಾಕ್ಡೌನ್ನಿಂದ 106 ದಿವಗಳ ಕಾಲ ಸ್ತಬ್ಧಗೊಂಡಿದ್ದ ಕನ್ನಡ ಚಿತ್ರೋದ್ಯಮ ಸಹಜ ಸ್ಥಿತಿಗೆ ಬರಲು ಹವಣಿಸುತ್ತಿದೆ. ಹಾಗಾಗಿ ಇದೀಗ ಕನ್ನಡ ಸಿನಿಮಾ ಪ್ರೇಕ್ಷಕರ ಮುಂದೆ ಬರುತ್ತಿದೆ. ಆದರೆ, ಚಿತ್ರಮಂದಿರದಲ್ಲಿ ಅಲ್ಲ ಒಟಿಟಿ ಮೂಲಕ. ಈಗ ಒಟಿಟಿ ಕಾಲ. ಇದೇ ಜೂನ್ 26 ರಂದು ಅಮೆಜಾನ್ ಪ್ರೈಮ್ನಲ್ಲಿ ಪಿಆರ್ಕೆ ಪ್ರೊಡಕ್ಷನ್ ನಿರ್ಮಾಣದ ‘ಲಾ’ ಸಿನಿಮಾ ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದೆ. ಪ್ರೇಕ್ಷಕರು ತಾವು ಇರುವ ಜಾಗದಲ್ಲಿ ಈ ಸಿನಿಮಾವನ್ನು ಜೂನ್ 26 ಮಧ್ಯರಾತ್ರಿ 12 ಘಂಟೆಯಿಂದಲೇ ನೋಡಬಹುದಾಗಿದೆ.
ಮುಂದಿನ ತಿಂಗಳು ಜುಲೈ 24ರಂದು ಇದೇ ಪಿಆರ್ಕೆ ಪ್ರೊಡಕ್ಷನ್‌ನಿಂದ ‘ಫ್ರೆಂಚ್ ಬಿರ್ಯಾನಿ’ ಸಹ ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆಯಾಗುತ್ತಿದೆ. ಕೊರೊನಾ ವೈರಸ್‌ನಿಂದಾಗಿ ಮಾರ್ಚ್14ರಿಂದ ಎಲ್ಲಾ ಚಿತ್ರಮಂದಿರಗಳನ್ನು ಸ್ಥಗಿತ ಮಾಡಲಾಯಿತು. ಆದರೆ, ಮಾರ್ಚ್ 12ರಂದು ಚಿರಂಜೀವಿ ಸರ್ಜಾ ಅಭಿನಯದ ‘ಶಿವಾರ್ಜುನ’ ಬಿಡುಗಡೆ ಆಗಿತ್ತು. ಮಾರ್ಚ್ 13 ರಂದು ನರಗುಂದ ಭಂಡಾಯ, ನಂ ಕಥೆ ನಿಮ್ ಜೊತೆ, ಕುಷ್ಕ, 5 ಅಡಿ 7 ಅಂಗುಲ ಕನ್ನಡ ಸಿನಿಮಾಗಳು ಕೇವಲ ಒಂದು ದಿನ ಪ್ರದರ್ಶನ ಕಂಡಿದ್ದವು.
ಇದೇ ಶುಕ್ರವಾರ ಜೂನ್ 26 ಅಂದರೆ 15 ಶುಕ್ರವಾರಗಳ ನಂತರ ಕನ್ನಡ ಪ್ರೇಕ್ಷಕರು ‘ಲಾ’ ಸಿನಿಮಾ ನೋಡಬಹುದಾಗಿದೆ. ಈ ಚಿತ್ರದಿಂದ ನಾಯಕ ನಟ ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಚಂದ್ರನ್ (ಈಗ ರಾಗಿಣಿ ಪ್ರಜ್ವಲ್) ಚಿತ್ರ ರಂಗಕ್ಕೆ ಕಾಲಿಟ್ಟಿದ್ದಾರೆ. ರಾಗಿಣಿ ಅವರು ಈ ಚಿತ್ರದಲ್ಲಿ ವಕೀಲರಾಗಿ ಪಾತ್ರ ನಿರ್ವಹಿಸಿದ್ದಾರೆ.
ಈ ಲಾಕ್‌ಡೌನ್ ಸಮಯದಲ್ಲಿ ಒಟಿಟಿ ವೇದಿಕೆಯಲ್ಲಿ ಅಮಿತಾಭ್ ಬಚ್ಚನ್, ಆಯುಷ್ಮಾನ್ ಖುರಾನ ಅಭಿನಯದ ‘ಗುಲಾಬೋ ಸಿತಾಬೋ’ ಜ್ಯೋತಿಕ ಅಭಿನಯದ ‘ಪೊಂಮಗಳ್ ವಾಂಧಳ್’, ಕೀರ್ತಿ ಸುರೇಶ್ ಅಭಿನಯದ ‘ಪೆಂಗ್ವಿನ್’ ಬಿಡುಗಡೆ ಆಗಿದ್ದವು. ಈಗ ಕನ್ನಡದ ‘ಲಾ’ ಸಿನಿಮಾ ಅದೇ ರೀತಿ ಬಿಡುಗಡೆಯಾಗುತ್ತಿದೆ. ‘ಲಾ’ ಚಿತ್ರದಲ್ಲಿ ಸಿರಿ ಪ್ರಹ್ಲಾದ್, ಮುಖ್ಯಮಂತ್ರಿ ಚಂದ್ರು ಸಹ ಪ್ರಮುಖ ಪಾತ್ರದಲ್ಲಿದ್ದಾರೆ.