ಸರ್ಕಾರಿ ಕೆಲಸ ಪಡೆಯಬೇಕು ಎಂದರೆ ಇಂತಿಷ್ಟೇ ವಿದ್ಯಾಭ್ಯಾಸ ಮಾಡಿರಬೇಕು. ಆದರೆ ವಿದ್ಯಾಭ್ಯಾಸದ ಬಗ್ಗೆ ಕೇಳದ ಕ್ಷೇತ್ರ ಎಂದರೆ ಅದು ಚಿತ್ರರಂಗ ಮಾತ್ರ ಎನ್ನಬಹುದು. ನಮ್ಮ ಕನ್ನಡ ಚಿತ್ರರಂಗದಲ್ಲಿ ಕೆಲವು ನಟರು ಪದವೀಧರರಾದರೆ ಮತ್ತೆ ಕೆಲವರು ಪಿಯುಸಿವರೆಗೆ ಓದಿದ್ದಾರೆ. ಕೆಲವರು ವಿದ್ಯಾಭ್ಯಾಸದಲ್ಲಿ ಯಶಸ್ವಿಯಾಗದಿದ್ದರೂ ಚಿತ್ರರಂಗದಲ್ಲಿ ಯಶಸ್ವಿಯಾಗಿ ನೆಲೆ ಕಂಡಿದ್ದಾರೆ. ಹಾಗಿದ್ದರೆ ಯಾವ ಯಾವ ಸ್ಟಾರ್ ನಟರು ಏನು ಓದಿದ್ದಾರೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ವರನಟ ಡಾ. ರಾಜ್ಕುಮಾರ್
![Kannada film industry stars](https://etvbharatimages.akamaized.net/etvbharat/prod-images/kn-bng-01-kannada-stars-education-bhagge-story-7204735_20072020152746_2007f_1595239066_924.jpg)
ಕನ್ನಡ ಚಿತ್ರರಂಗದ ಐಕಾನ್ ಆಗಿರುವ ನಟ ಡಾ.ರಾಜ್ ಕುಮಾರ್ ಅಮೋಘ ಅಭಿನಯ, ಸರಳ ವ್ಯಕ್ತಿತ್ವ ಹೊಂದಿರುವ ಮೇರು ನಟ. ಭಾರತೀಯ ಚಿತ್ರರಂಗದಲ್ಲಿ ಡಾ. ರಾಜ್ಕುಮಾರ್ ಹೆಸರು ಅಜರಾಮರವಾಗಿ ಉಳಿದಿದೆ. ಇನ್ನು ನಟಸಾರ್ವಭೌಮನ ವಿದ್ಯಾಭ್ಯಾಸ ಕೇಳಿದ್ರೆ ಅಚ್ಚರಿ ಆಗುತ್ತೆ. ಕೋಟ್ಯಂತರ ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ನೆಲೆಸಿರುವ ಅಣ್ಣಾವ್ರು ಓದಿರುವುದು 4ನೇ ತರಗತಿ ಮಾತ್ರ. ಆದರೂ ಕಲಾಜಗತ್ತಿನಲ್ಲಿ ಅವರು ಸಾಧಿಸಿದ್ದು ಮಾತ್ರ ಬೆಟ್ಟದಷ್ಟು ಎನ್ನುವುದು ಹೆಮ್ಮೆಯ ಸಂಗತಿ.
ಅಭಿನಯ ಭಾರ್ಗವ ಡಾ. ವಿಷ್ಣುವರ್ಧನ್
![Kannada film industry stars](https://etvbharatimages.akamaized.net/etvbharat/prod-images/8099106_7_8099106_1595244941515.png)
ಕನ್ನಡ ಚಿತ್ರರಂಗದಲ್ಲಿ ಸಾಹಸಸಿಂಹ ಹಾಗೂ ಹೃದಯವಂತನಾಗಿ ಮೆರೆದ ನಟ ಡಾ. ವಿಷ್ಣುವರ್ಧನ್. ಅಭಿನಯದ ಭಾರ್ಗವ ಪ್ರಾಥಮಿಕ, ಫ್ರೌಡ ಶಿಕ್ಷಣ ಮತ್ತು ಪದವಿ ಮಾಡಿದ್ದು ಬೆಂಗಳೂರಿನಲ್ಲಿ. ನಾಗರಹಾವು ಸಿನಿಮಾಗೆ ಆಯ್ಕೆ ಆಗುವ ಮುನ್ನ, ವಿಷ್ಣುವರ್ಧನ್ ಬಿಎಸ್ಸಿ ಮುಗಿಸಿದ್ರಂತೆ.
ರೆಬಲ್ ಸ್ಟಾರ್ ಡಾ. ಅಂಬರೀಷ್
![Kannada film industry stars](https://etvbharatimages.akamaized.net/etvbharat/prod-images/kn-bng-01-kannada-stars-education-bhagge-story-7204735_20072020152746_2007f_1595239066_453.jpg)
ಮಂಡ್ಯದ ಗಂಡು ಅಂತಾನೆ ಇಡೀ ದೇಶಕ್ಕೆ ಚಿರಪರಿಚಿತನಾದ ನಟ ರೆಬಲ್ ಸ್ಟಾರ್ ಅಂಬರೀಶ್. ನಾಗರಹಾವು ಸಿನಿಮಾದಲ್ಲಿ ಜಲೀಲನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅಂಬರೀಷ್ ಓದಿರುವುದು ಪಿಯುಸಿ ಅಂತೆ. ಆದರೆ ಚಿತ್ರರಂಗದಲ್ಲಿ ಇವರು ಸಲ್ಲಿಸಿದ ಸೇವೆಗಾಗಿ ಕರ್ನಾಟಕ ವಿವಿ ಅಂಬಿಗೆ ಡಾಕ್ಟರೇಟ್ ನೀಡಿ ಗೌರವಿಸಿದೆ.
ಕ್ರೇಜಿಸ್ಟಾರ್ ರವಿಚಂದ್ರನ್
![Kannada film industry stars](https://etvbharatimages.akamaized.net/etvbharat/prod-images/kn-bng-01-ravichandran-bhagge-12-interesting-facts-7204735_30052020150326_3005f_1590831206_1069.jpg)
ಕನ್ನಡ ಚಿತ್ರರಂಗದ ಶೋ ಮ್ಯಾನ್ ಅಂತಾ ಕರೆಸಿಕೊಂಡಿರುವ ನಟ ಕ್ರೇಜಿ ಸ್ಟಾರ್ ರವಿಚಂದ್ರನ್ ವಿಜ್ಞಾನ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಸಿನಿಮಾದಲ್ಲಿ ಹೆಚ್ಚು ಆಸಕ್ತಿಯಿದ್ದ ರವಿಚಂದ್ರನ್ ತಮ್ಮ ತಂದೆ ವೀರಾಸ್ವಾಮಿ ಒತ್ತಾಯಕ್ಕೆ ಓದಿದ್ದಂತೆ. ಚಿತ್ರರಂಗಕ್ಕೆ ಬರುವ ಮುನ್ನ ರವಿಚಂದ್ರನ್ ಮ್ಯಾಜಿಷಿಯನ್ ಆಗಿದ್ದರು ಎಂಬ ವಿಚಾರ ಯಾರಿಗೂ ತಿಳಿದಿಲ್ಲ.
ಪುನೀತ್ ರಾಜ್ಕುಮಾರ್
![Kannada film industry stars](https://etvbharatimages.akamaized.net/etvbharat/prod-images/kn-bng-01-kannada-stars-education-bhagge-story-7204735_20072020152746_2007f_1595239066_889.jpg)
ಬೆಟ್ಟದ ಹೂವು, ಪವರ್ ಸ್ಟಾರ್ ಎಂದೇ ಅಭಿಮಾನಿಗಳ ಬಳಿ ಪ್ರೀತಿಯಿಂದ ಕರೆಸಿಕೊಂಡಿರುವ ಪುನೀತ್ ರಾಜ್ಕುಮಾರ್ ಬಾಲ್ಯದಿಂದಲೇ ಚಿತ್ರರಂಗಕ್ಕೆ ಬಂದವರು. ಈ ಕಾರಣ ಅವರು ಶಾಲೆಗೆ ಹೆಚ್ಚಾಗಿ ಹೋಗಿಲ್ಲವಂತೆ. ಆದರೆ ಮನೆಯಲ್ಲೇ ಪಾಠ ಹೇಳಿಸಿಕೊಂಡ ಪುನೀತ್ 8ನೇ ತರಗತಿವರೆಗೆ ಓದಿ ನಂತರ ಪದವಿ ಮುಗಿಸಿದ್ದಾರೆ ಎನ್ನಲಾಗಿದೆ.
ಶಿವರಾಜ್ಕುಮಾರ್
![Kannada film industry stars](https://etvbharatimages.akamaized.net/etvbharat/prod-images/kn-bng-01-kannada-stars-education-bhagge-story-7204735_20072020152746_2007f_1595239066_273.jpg)
ವಯಸ್ಸು 58 ಆದರು ಇನ್ನೂ ಯಂಗ್ ಹೀರೋನಂತೆ ಕಾಣುವ ಸೆಂಚುರಿ ಸ್ಟಾರ್, ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್ ಮ್ರದಾಸ್ ವಿವಿಯಿಂದ ಪದವಿ ಪಡೆದಿದ್ದಾರಂತೆ.
ಕಿಚ್ಚ ಸುದೀಪ್
![Kannada film industry stars](https://etvbharatimages.akamaized.net/etvbharat/prod-images/kn-bng-01-kannada-stars-education-bhagge-story-7204735_20072020152746_2007f_1595239066_451.jpg)
ತಾನೊಬ್ಬ ಕ್ರಿಕೆಟ್ ಪ್ಲೇಯರ್ ಆಗಬೇಕು ಅಂದುಕೊಂಡಿದ್ದ ಕಿಚ್ಚ ಸುದೀಪ್, ಇಂದು ದಕ್ಷಿಣ ಸಿನಿಮಾ ಇಂಡಸ್ಟ್ರಿ ಸ್ಟಾರ್ ನಟ ಆಗಿ ಹೊರ ಹೊಮ್ಮಿದ್ದಾರೆ. ಕನ್ನಡದ ಜೊತೆಗೆ ಅಮೆರಿಕನ್ ಶೈಲಿಯಲ್ಲಿ ಮಾತನಾಡುವ ಪೈಲ್ವಾನ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಶಿವಮೊಗ್ಗದ ವಾಸವಿ ವಿದ್ಯಾಲಯದಲ್ಲಿ, ನಂತರ ಬೆಂಗಳೂರಿನ ದಯಾನಂದ ಸಾಗರ್ ಕಾಲೇಜಿನಲ್ಲಿ, ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಮುಗಿಸಿದ್ದಾರೆ.
ರಮೇಶ್ ಅರವಿಂದ್
![Kannada film industry stars](https://etvbharatimages.akamaized.net/etvbharat/prod-images/8099106_485_8099106_1595244982287.png)
ಕನ್ನಡ ಚಿತ್ರರಂಗದಲ್ಲಿ ಅಂದಿನಿಂದ ಇಂದಿನವರೆಗೂ ಅದೇ ಬೇಡಿಕೆ ಉಳಿಸಿಕೊಂಡಿರುವ ನಟ ರಮೇಶ್ ಅರವಿಂದ್. ನಟ, ನಿರ್ದೇಶಕ, ನಿರೂಪಕ ಕೂಡಾ ಆಗಿರುವ ರಮೇಶ್ ಅರವಿಂದ್ ಬಿಇ ಪದವಿ ಮುಗಿಸಿದ್ದಾರೆ ಎನ್ನಲಾಗಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್
![Kannada film industry stars](https://etvbharatimages.akamaized.net/etvbharat/prod-images/kn-bng-01-kannada-stars-education-bhagge-story-7204735_20072020152746_2007f_1595239066_998.jpg)
ಲೈಟ್ ಬಾಯ್ ಆಗಿ ಕರಿಯರ್ ಆರಂಭಿಸಿ ಸ್ಟಾರ್ ಹೀರೋ ಆಗಿ ಯಶಸ್ಸು ಕಂಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಓದಿರುವುದು ಪಿಯುಸಿ. ತೂಗುದೀಪ್ ಶ್ರೀನಿವಾಸ್, ಮೀನಾ ತೂಗುದೀಪ ದಂಪತಿಯ ಮೊದಲ ಪುತ್ರ ದರ್ಶನ್ ಮೈಸೂರಿನ ಕಾಲೇಜಿನಲ್ಲಿ ತಮ್ಮ ವಿದ್ಯಾಭ್ಯಾಸ ಮುಗಿಸಿದ್ದಾರೆ.
ರಾಕಿಂಗ್ ಸ್ಟಾರ್ ಯಶ್
![Kannada film industry stars](https://etvbharatimages.akamaized.net/etvbharat/prod-images/kn-bng-01-kannada-stars-education-bhagge-story-7204735_20072020152746_2007f_1595239066_411.jpg)
ಕಿರುತೆರೆಯಿಂದ ಬಂದು ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್ ಆಗಿರುವ ನಟ ರಾಕಿಂಗ್ ಸ್ಟಾರ್ ಯಶ್. ಚಿಕ್ಕ ವಯಸ್ಸಿನಿಂದಲೂ ಸಿನಿಮಾ ಹೀರೋ ಆಗಬೇಕು ಅಂತಾ ಕನಸು ಕಂಡಿದ್ದ ಯಶ್, ಡಿಗ್ರಿ ಮುಗಿಸಿ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್
![Kannada film industry stars](https://etvbharatimages.akamaized.net/etvbharat/prod-images/kn-bng-01-kannada-stars-education-bhagge-story-7204735_20072020152746_2007f_1595239066_1079.jpg)
ಕಾಮಿಡಿ ಮಾಡುತ್ತಾ ಕನ್ನಡ ಚಿತ್ರರಂಗದಲ್ಲಿ ಹೀರೋ ಆದ ನಟ ಗಣೇಶ್. ಕಾಲೇಜು ದಿನಗಳಿಂದ ಸಿನಿಮಾ ಗೀಳು ಅಂಟಿಸಿಕೊಂಡಿದ್ದ ಗಣೇಶ್ ಡಿಪ್ಲೊಮಾ ಇನ್ ಎಲೆಕ್ಟ್ರಾನಿಕ್ಸ್ ಓದಿದ್ದಾರೆ.
ಹೀಗೆ ಕನ್ನಡ ಚಿತ್ರರಂಗದಲ್ಲಿ ಪದವಿ ಮುಗಿಸಿ ಬಂದಿರುವ ನಟರೂ ಇದ್ದಾರೆ. ಓದನ್ನು ಅರ್ಧದಲ್ಲೇ ಬಿಟ್ಟು ಬಂದ ನಟರಿದ್ದಾರೆ. ಒಟ್ಟಿನಲ್ಲಿ ವಿದ್ಯಾಭ್ಯಾಸ ಎಂಬುದು ಕೇವಲ ತಿಳುವಳಿಕೆಗೆ ಮಾತ್ರ. ಪರೀಕ್ಷೆಯಲ್ಲಿ ರ್‍ಯಾಂಕ್ ಪಡೆದವರು ದೊಡ್ಡ ಮಟ್ಟಕ್ಕೆ ಬೆಳೆಯುತ್ತಾರೆ. ಕಡಿಮೆ ಓದಿದವರು ಒಳ್ಳೆ ಜೀವನ ಪಡೆಯುವುದಿಲ್ಲ ಎಂದು ಹೇಳಲು ಸಾಧ್ಯವೇ ಇಲ್ಲ. ಎಲ್ಲಾ ಅವರವರ ಶ್ರಮ, ಅದೃಷ್ಟ, ಪ್ರತಿಭೆ ಮೇಲೆ ನಿಂತಿದೆ ಎನ್ನುವುದಕ್ಕೆ ಇದು ಸಾಕ್ಷಿ.