ಕನ್ನಡದ ಹಲವು ಪ್ರತಿಭೆಗಳು ನೆರೆ ರಾಜ್ಯದ ಭಾಷೆಗಳಲ್ಲಿ ಕಿರುತೆರೆ ಲೋಕದಲ್ಲಿ ಮಿಂಚುತ್ತಿದ್ದಾರೆ. ಅಂತವರ ಸಾಲಿನಲ್ಲಿ ‘ನಾಗಕನ್ನಿಕೆ’ ಹಾಗೂ 'ಇವಳು ಸುಜಾತಾ' ಖ್ಯಾತಿಯ ಮೇಘಶ್ರೀ ಕೂಡ ಒಬ್ಬರು.
ಮೊದಲ ಧಾರಾವಾಹಿ ‘ನಾಗಕನ್ನಿಕೆ’ಯಲ್ಲೇ ಹೆಸರು ಮಾಡಿದ ನಟಿ ಮೇಘಶ್ರೀ, ಕನ್ನಡ ಕಿರುತೆರೆ ಮಂದಿಗೆ ಚಿರಪರಿಚಿತರು. ನಂತರ ‘ಇವಳು ಸುಜಾತಾ’ದಲ್ಲಿ ನಟಿಸಿ ಅಪಾರ ಜನಪ್ರಿಯತೆ ಗಳಿಸಿದ್ದು ಇದೀಗ ಪಂಚಭಾಷಾ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ಮೇಘಶ್ರೀ ಸದ್ಯಕ್ಕೆ ‘ಜ್ಯೋತಿ’ ಎಂಬ ಧಾರಾವಾಹಿಯಲ್ಲಿ ನಟಿಸುತ್ತಿದ್ದು, ಈ ಧಾರಾವಾಹಿ ಇದೇ ಹೆಸರಿನಲ್ಲಿ ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ತೆಲುಗು, ಮಲೆಯಾಳಂ ಮತ್ತು ಬೆಂಗಾಲಿ ಭಾಷೆಗೆ ಡಬ್ ಆಗಿ ಪ್ರಸಾರವಾಗುತ್ತಿದೆ. 'ಜ್ಯೋತಿ' ಸೂಪರ್ ನ್ಯಾಚುರಲ್ ಧಾರಾವಾಹಿಯಾಗಿದ್ದು, ಇದರಲ್ಲಿ ಅವರು ರಾಣಿಯಾಗಿ ಮತ್ತು ನಾಗಕನ್ನಿಕೆ ಪಾತ್ರ ನಿರ್ವಹಿಸುತ್ತಿದ್ದಾರೆ.
ಮೇಘಶ್ರೀ ಅವರು 10ನೇ ತರಗತಿ ಓದುತ್ತಿರುವಾಗಲೇ ಸಾಕಷ್ಟು ಅವಕಾಶಗಳು ಅವರನ್ನು ಅರಸಿಕೊಂಡು ಬಂದವು. ಧಾರಾವಾಹಿ ಮತ್ತು ಸಿನಿಮಾ ಎರಡನ್ನೂ ಬ್ಯಾಲೆನ್ಸ್ ಮಾಡಿಕೊಂಡು ಬರುತ್ತಿರುವ ಮೇಘಶ್ರೀ ಅವರು ನಟಿಯಾಗಿ ಪಾದಾರ್ಪಣೆ ಮಾಡಿದ್ದು ಮಾತ್ರ ತೆಲುಗು ಚಿತ್ರರಂಗದ ಮೂಲಕ. ತೆಲುಗಿನಲ್ಲಿ ನಾಲ್ಕೈದು ಸಿನಿಮಾ ಮಾಡಿದ ಮೇಘಶ್ರೀ, ನಂತರದ ದಿನಗಳಲ್ಲಿ ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ.
'ಮಾರ್ಚ್ 22' ಕನ್ನಡದಲ್ಲಿ ಬಿಡುಗಡೆಯಾದ ಮೇಘಶ್ರೀ ಅವರ ಮೊದಲ ಸಿನಿಮಾ. ಸದ್ಯ ಇವರ 'ರಾಜ ಮಾರ್ತಾಂಡ' ಸಿನಿಮಾ ಬಿಡುಗಡೆಗೆ ಸಿದ್ಧವಿದೆ. 'ವಾರ್ಡ್ ನಂಬರ್ 11' ಮತ್ತು 'ಮನಸ್ಸಾಗಿದೆ' ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. 'ಓಲ್ಡ್ಮಾಂಕ್' ಸಿನಿಮಾದಲ್ಲಿ ಮೇಘಶ್ರೀ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಭೋಜ್ಪುರಿ ಸಿನಿ ಇಂಡಸ್ಟ್ರಿಗೂ ಮೇಘಶ್ರೀ ಪದಾರ್ಪಣೆ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.