ಎಲ್ಲರೂ ಕನಸು ಹೊತ್ತುಕೊಂಡೆ ಚಿತ್ರರಂಗವೆಂಬ ಮಾಯಾ ಲೋಕಕ್ಕೆ ಬರುತ್ತಾರೆ. ಆದರೆ, ಕೆಲವರು ಮಾತ್ರ ವಿ.ರವಿಚಂದ್ರನ್ ಅವರಂತೆ ‘ಕನಸುಗಾರ’ ಆಗುತ್ತಾರೆ. ಈದೀಗ ಯುವ ತಂಡವೊಂದು ಕನಸುಗಳ ಬುಟ್ಟಿಯನ್ನೇ ಹೊತ್ತುಕೊಂಡು ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದೆ. ಕರಾವಳಿಯಿಂದ ಬಂದ ಈ ತಂಡ ದಕ್ಷಿಣ ಕನ್ನಡ, ಹಾಸನ, ಬೆಂಗಳೂರು ಹಾಗೂ ಉಡುಪಿಯಲ್ಲಿ ಚಿತ್ರೀಕರಣ ಮುಗಿಸಿ ‘ಕನಸು ಮಾರಾಟ'ಕ್ಕಿಡಲು ರೆಡಿಯಾಗಿದೆ.
ಹೌದು, 'ಕನಸು ಮಾರಾಟಕ್ಕಿದೆ' ಎಂಬ ಶೀರ್ಷಿಕೆಯಡಿ ಕರಾವಳಿಯ ಯವಪಡೆಯೊಂದು ಚಿತ್ರವೊಂದನ್ನು ತೆರೆ ಮೇಲೆ ತರುವ ಹುಮ್ಮಸ್ಸಿನಲ್ಲಿದೆ. ಯುವಕರನ್ನೇ ಮನಸಿನಲ್ಲಿಟ್ಟುಕೊಂಡು ಹಣೆಯಲಾದ ಈ ಚಿತ್ರದ ಕಥೆಯಲ್ಲಿ, ಕನಸುಗಳನ್ನು ಹಿಂಬಾಲಿಸುವ ಹುಡುಗನ ಪರಿಸ್ಥಿತಿ, ಅದನ್ನು ನನಸು ಮಾಡಲು ಪಡುವ ಕಷ್ಟ, ಕನಸು ನಿಜ ಆಗದಿದ್ದರೂ, ಅದನ್ನು ನನಸಾಗಿಸಲು ಹೊರಡುವ ಸ್ನೇಹಿತರು ಇತ್ಯಾದಿ ವಿಷಯಗಳು ಅಡಕವಾಗಿವೆ.
ಕನಸು ಮಾರಾಟಕ್ಕಿದೆ ಚಿತ್ರದ ಮೂಲಕ ಯುವ ಪ್ರತಿಭೆಗಳಾದ ಪ್ರಜ್ಞೆಶ್ ಶೆಟ್ಟಿ, ಸ್ವಸ್ತಿಕ ಪೂಜಾರಿ, ನವ್ಯಾ ಪೂಜಾರಿ ಮೊದಲ ಬಾರಿಗೆ ಕ್ಯಾಮರಾ ಎದುರಿಸಿದ್ದಾರೆ. ಹಿರಿಯ ನಟ ಸಿದ್ಲಿಂಗು ಶ್ರೀಧರ್, ಗೋವಿಂದೆ ಗೌಡ, ಸೂರ್ಯ ಕುಂದಾಪುರ, ಧೀರಜ್ ಮಂಗಳೂರು, ಚಿದಂಬರ, ಅನಿಷ್ ಪೂಜಾರಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ವೃತ್ತಿಯಲ್ಲಿ ಉಪನ್ಯಾಸಕರಾಗಿರುವ ಸ್ಮಿತೇಶ್ ಎಸ್.ಆಚಾರ್ಯ ಈ ಚಿತ್ರದ ಮೂಲಕ ನಿರ್ದೇಶಕ ಪಟ್ಟ ಅಲಂಕರಿಸಲಿದ್ದು, ಅನಿಷ್ ಪೂಜಾರಿ ಚಿತ್ರಕ್ಕೆ ಸಹ ನಿರ್ದೇಶನ, ಚಿತ್ರಕಥೆ, ಸಂಭಾಷಣೆ ನಿರ್ವಹಿಸಿದ್ದಾರೆ. ಗಾಯಕಿ ಮಾನಸ ಹೊಳ್ಳ ಚಿತ್ರದ ಐದು ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದು, ಇದು ಸಂಗೀತ ನಿರ್ದೇಶಕಿಯಾಗಿ ಇವರಿಗೆ ಎರಡನೇ ಸಿನಿಮಾ. ಮಾನಸ ಹೊಳ್ಳ ಹೆಸರಾಂತ ಪೋಷಕ ನಟ ಶಂಖನಾದ ಅರವಿಂದ್ ಪುತ್ರಿ ಈ ಹಿಂದೆ ‘6 ಟು 6’ ಕನ್ನಡ ಸಿನಿಮಾಕ್ಕೆ ಸಂಗೀತ ನಿರ್ದೇಶಕಿಯಾಗಿ ಇವರು ಕೆಲಸ ಮಾಡಿದ್ದರು.
ಸಂತೋಷ್ ಆಚಾರ್ಯ ಗುಂಪಲಾಜೆ ಛಾಯಾಗ್ರಹಣ, ಗಣೇಶ್ ನಿರ್ಚಾಲ್ ಸಂಕಲನ ಮಾಡಿದ್ದರೆ, ಡಾ.ವಿ.ನಾಗೇಂದ್ರ ಪ್ರಸಾದ್, ಕವಿರಾಜ್, ಚೇತನ್ ಕುಮಾರ್ ಮತ್ತು ಸುಖೇಶ್ ಶೆಟ್ಟಿ ಚಿತ್ರದ ಹಾಡುಗಳನ್ನು ರಚಿಸಿದ್ದಾರೆ. ಮಡಿಕೇರಿ ಮೂಲದ ಶಿವಕುಮಾರ್ ನಿರ್ಮಾಣದಲ್ಲಿ ಮೂಡಿ ಬರಲಿರುವ ಚಿತ್ರಕ್ಕೆ ಲಾಕ್ ಡೌನ್ ಮುಗಿದ ಬಳಿಕ ಸೆನ್ಸಾರ್ ಸರ್ಟಿಫಿಕೆಟ್ ಸಿಗುವ ಸಾಧ್ಯತೆಯಿದೆ.