ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಮೆಗಾ ಸಿನಿಮಾ ಆರ್‌ಆರ್‌ಆರ್ ಇದೇ ಮಾರ್ಚ್ 25ಕ್ಕೆ ವಿಶ್ವದಾದ್ಯಂತ ತೆರೆ ಕಾಣಲಿದೆ. ಆರ್‌ಆರ್‌ಆರ್ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ನಿನ್ನೆ ಚಿಕ್ಕಬಳ್ಳಾಪುರದ ಅಗಲಗುರ್ಕಿ ಗ್ರಾಮದಲ್ಲಿ ನಡೆಯಿತು. ಒಂದುವರೆ ಲಕ್ಷಕ್ಕೂ ಹೆಚ್ಚು ಜನರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಈ ಅದ್ಧೂರಿ ಕಾರ್ಯಕ್ರಮದಲ್ಲಿ ಮಾತನಾಡಿದ ತೆಲುಗು ಚಿತ್ರರಂಗದ ನಟ ಜೂನಿಯರ್ ಎನ್‌ಟಿಆರ್, ಮೊದಲು ಕನ್ನಡದಲ್ಲಿ ಮಾತು ಆರಂಭಿಸಿದರು. ನನ್ನ ತಾಯಿ ಕರ್ನಾಟಕದ ಕುಂದಾಪುರದವರು.
ನಾವು ಮನೆಯಲ್ಲಿ ಕನ್ನಡ ಮಾತನಾಡುತ್ತಾ ಇರುತ್ತೇವೆ ಎಂದರು. ಬಳಿಕ ದಿ. ಪುನೀತ್ ರಾಜ್ಕುಮಾರ್ ಬಗ್ಗೆ ಹಾಡಿ ಹೊಗಳಿದರು. ಅಪ್ಪು ಅವರನ್ನು ಪರಿಸರ, ಭೂಮಿ, ಗಾಳಿ, ಮಳೆಗೆ ಹೋಲಿಸಿದರು.
ಅಷ್ಟೇ ಅಲ್ಲ, ಲಕ್ಷಾಂತರ ಜನರು ಸೇರಿದ್ದ ಸಮಯದಲ್ಲಿ ನಿಧಾನವಾಗಿ ಮಳೆ ಹನಿಗಳು ಬಿದ್ದವು. ಆ ಒಂದು ಕ್ಷಣ ಆರ್‌ಆರ್‌ಆರ್ ಚಿತ್ರ ತಂಡಕ್ಕೆ ಭಯ ಆಗಿದ್ದು ಸುಳ್ಳಲ್ಲ. ನಂತರ ವೇದಿಕೆಯಲ್ಲಿ ಜೂನಿಯರ್ ಎನ್‌ಟಿಆರ್ ಮಾತನಾಡುವ ವೇಳೆ, ಪುನೀತ್ ಸರ್ ಎಲ್ಲೂ ಹೋಗಿಲ್ಲ ಅನ್ನುವುದಕ್ಕೆ ತಾಜಾ ಉದಾಹರಣೆ ಅಂದ್ರೆ, ಬರುತ್ತಿದ್ದ ಮಳೆಯನ್ನೇ ಪುನೀತ್ ಸರ್ ನಿಲ್ಲಿಸಿದ್ದಾರೆ ಅಂತಾ ಹೇಳಿದ್ರು.
ಬಳಿಕ ಜೂನಿಯರ್ ಎನ್‌ಟಿಆರ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಧನ್ಯವಾದ ಅರ್ಪಿಸಿದರು. ಚಿಕ್ಕಬಳ್ಳಾಪುರದ ಮಗ, ಆರೋಗ್ಯ ಸಚಿವ, ನನ್ನ ಸ್ನೇಹಿತ, ನನ್ನ ಅಣ್ಣನ ರೀತಿ ಇರುವ ಸುಧಾಕರ್ ಅವರಿಗೆ ಧನ್ಯವಾದ. ನಮ್ಮ ದೊಡ್ಡ ಅಣ್ಣ ಶಿವರಾಜ್ಕುಮಾರ್ ಅವರಿಗೆ ಧನ್ಯವಾದಗಳು ಎಂದು ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯರಿಗೆ ಜೂನಿಯರ್ ಎನ್‌ಟಿಆರ್ ಮನದಾಳದಿಂದ ಕನ್ನಡದಲ್ಲೇ ಧನ್ಯವಾದಗಳನ್ನು ತಿಳಿಸಿದ್ರು.
ಇದನ್ನೂ ಓದಿ: 'ಪುನೀತ್ ಸರ್ ನಮ್ಮ ಹೃದಯಲ್ಲಿದ್ದಾರೆ, ಅವರು ನಮ್ಮಿಂದ ದೂರ ಹೋಗಲು ಸಾಧ್ಯವಿಲ್ಲ': ಜೂ. ಎನ್‌ಟಿಆರ್
ಈ ಅದ್ಧೂರಿ ವೇದಿಕೆಯಲ್ಲಿ ಜೂನಿಯರ್ ಎನ್‌ಟಿಆರ್, ಪುನೀತ್ ರಾಜ್ಕುಮಾರ್ ಅವರನ್ನು ಪ್ರಕೃತಿಗೆ ಹೋಲಿಸಿದ್ದು, ಪುನೀತ್ ಹಾಗೂ ಅವರ ನಡುವೆ ಎಂಥಾ ಸ್ನೇಹ ಇತ್ತು ಅನ್ನೋದನ್ನು ತಿಳಿಸಿತು.