ಕ್ಯಾಲಿಫೋರ್ನಿಯಾ(ಅಮೆರಿಕ): ಬಹು ನಿರೀಕ್ಷಿತ 2020ನೇ ಸಾಲಿನ ಆಸ್ಕರ್ ಪ್ರಶಸ್ತಿ ಪ್ರಕಟಗೊಂಡಿದ್ದು, ಜೋಕರ್ ಚಿತ್ರದ ನಟನೆಗೆ ಜೊವಾಕ್ವಿನ್ ಫೀನಿಕ್ಸ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರೆತಿದ್ದು, ಇದೇ ವೇಳೆ ಮಾತನಾಡಿದ ಅವರು, ಜಗತ್ತಿನಲ್ಲಿ ನಡೆಯುತ್ತಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತಿದ್ದಾರೆ.
ಕ್ಯಾಲಿಫೋರ್ನಿಯಾದ ಡಾಲ್ಬಿ ಥಿಯೇಟರ್‌ನಲ್ಲಿ ಈ ಕಾರ್ಯಕ್ರಮ ನಡೆದಿದ್ದು, ಫೀನಿಕ್ಸ್ ಅವರು ಸ್ವತಃ ನಾನೇ ಕೆಲವೊಮ್ಮೆ ಕ್ರೂರ ಮತ್ತು ಸ್ವಾರ್ಥಿಗಳಾಗಿದ್ದೇನೆ ಎಂದು ಅಭಿಪ್ರಾಯಪಟ್ಟರು.
ಜಗತ್ತಿನಲ್ಲಿ ಎಲ್ಲರೂ ಸಮಾನರು ಆದರೆ ಇವತ್ತಿಗೂ ಲಿಂಗ ಅಸಮಾನತೆ, ವರ್ಣಭೇದ ನೀತಿಗಳು ಎದ್ದು ತೋರುತ್ತಿವೆ. ಆದರೆ, ಇಂತಹ ಅನ್ಯಾಯಗಳ ವಿರುದ್ಧ ನಾವು ಧ್ವನಿ ಎತ್ತಬೇಕಾದದ್ದು ಅವಶ್ಯವಾಗಿದೆ. ಮನುಷ್ಯನ ಸ್ವಾರ್ಥಕ್ಕಾಗಿ ಬೇರೆಯವರ ನೆಮ್ಮದಿ ಸಂತೋಷವನ್ನು ಕಿತ್ತುಕೊಳ್ಳುವಂತೆ, ಪ್ರಾಣಿ ಪಕ್ಷಿಗಳ ಹಕ್ಕನ್ನು ಕಿತ್ತುಕೊಳ್ಳುತ್ತಿದ್ದೇವೆ ಎಂದು ಫೀನಿಕ್ಸ್ ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ವಿದ್ಯಾಮಾನದಲ್ಲಿ ಒಂದು ದೇಶ, ಒಂದು ಜನಾಂಗ, ಒಂದು ಲಿಂಗ ಹೀಗೆ ಈ ರೀತಿಯಲ್ಲಿ ಪ್ರಾಬಲ್ಯ ಸಾಧಿಸುವತ್ತ ನಮ್ಮ ಗಮನ ಹರಿಸಿಸುವ ಮೂಲಕ ನೈಸರ್ಗಿಕ ಜಗತ್ತಿನಿಂದ ದೂರವಾಗುತ್ತಿದ್ದೇವೆ ಎಂಬುದು ನನ್ನ ಭಾವನೆಯಾಗಿದೆ ಎಂದು ಹೇಳಿದ್ದಾರೆ.
ಮನುಷ್ಯ ಕೇವಲ ಈ ಸಮಾಜವನ್ನು ಮಾತ್ರವಲ್ಲದೇ ನೈಸರ್ಗಿಕ ಸಂಪತ್ತನ್ನೂ ಕೊಳ್ಳೆ ಹೊಡೆಯುವಷ್ಟು ಕ್ರೂರಿಯಾಗಿದ್ದಾನೆ. ಇದರಿಂದಾಗಿ ಪ್ರಾಣಿ ಪಕ್ಷಿಗಳ ಹಕ್ಕುಗಳನ್ನು ಕಸಿದುಕೊಂಡಂತಾಗುತ್ತಿದೆ. ಹಸುವಿಗೆ ಕೃತಕ ಗರ್ಭಧಾರಣೆ ಮಾಡಿಸುವಷ್ಟು ಸಾಮರ್ಥ್ಯ ನಮ್ಮಲ್ಲಿದ್ದು, ನಂತರ ಆ ಹಸು ಜನ್ಮ ನೀಡಿದ ಕರುವನ್ನು ಸಹ ಕದಿಯುತ್ತೇವೆ ನಂತರ ಅದರ ಹಾಲನ್ನೂ ಸಹ ಪಡೆಯುತ್ತೇವೆ. ಆದರೆ ಇಷ್ಟೆಲ್ಲ ಪ್ರಕೃತಿಯಿಂದ ಪಡೆಯುವ ನಾವು, ಮತ್ತೆ ನಿಸರ್ಗವನ್ನೇ ಹಾಳು ಮಾಡುತ್ತಿದ್ದೇವೆ ಎಂದು ಅವರು ಕುಟುಕಿದರು.
ಮಾನವ ಸೃಜನಶೀಲನಾಗಿ, ಪ್ರೀತಿ ಮತ್ತು ಸಹಾನಭೂತಿಯ ಮಾರ್ಗಗಳನ್ನು ಅನುಸರಿಸಿದರೆ ಸಮಾಜದಲ್ಲಿ ಪ್ರಯೋಜನಕಾರಿಯಾಗಿ ಅಭಿವೃದ್ಧಿ ಪಡಿಯಬಹುದು ಹಾಗೂ ಕಾರ್ಯಗತಗೊಳಿಸಬಹುದು ಎಂದು ಫೀನಿಕ್ಸ್ ಅಭಿಪ್ರಾಯಪಟ್ಟರು.