ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ 'ಯುವರತ್ನ' ಸಿನಿಮಾ ಬಿಡುಗಡೆಯಾಗಬೇಕಿದೆಯಷ್ಟೇ. ಅದಕ್ಕೂ ಮುನ್ನ ಪುನೀತ್ ಅಭಿಮಾನಿಗಳಲ್ಲಿ 'ಜೇಮ್ಸ್' ಕ್ರೇಜ್ ಆರಂಭವಾಗಿದೆ. ಇನ್ನು ನಿರ್ದೇಶಕ ಚೇತನ್ ಹಾಗೂ ಪುನೀತ್ ರಾಜ್‍ಕುಮಾರ್ ಕಾಂಬಿನೇಷನ್ನಲ್ಲಿ 'ಜೇಮ್ಸ್' ಸಿನಿಮಾ ಮಾಡಲಾಗುವುದು ಎಂದು ಅನೌನ್ಸ್ ಮಾಡಿ ಮೂರು ವರ್ಷಗಳು ಕಳೆದಿವೆ.
'ಜೇಮ್ಸ್' ಸಿನಿಮಾ ಯಾವಾಗ ಸೆಟ್ಟೇರುವುದೋ ಎಂದು ಪುನೀತ್ ಅಭಿಮಾನಿಗಳು ಬಕಪಕ್ಷಿಗಳಂತೆ ಕಾಯುತ್ತಿದ್ದಾರೆ. ಆದರೆ ಸಿನಿಮಾ ಆರಂಭಕ್ಕೂ ಮುನ್ನ 'ಜೇಮ್ಸ್' ಕ್ರೇಜ್ ಶುರುವಾಗಿದೆ. ಪುನೀತ್ ರಾಜ್‍ಕುಮಾರ್ ಅಭಿಮಾನಿಗಳು ಇಂಗ್ಲೀಷ್ ಅಕ್ಷರಗಳಲ್ಲಿ JAMES ಎಂದು ಹೇರ್ಸ್ಟೈಲ್ ಮಾಡಿಸಿ ಆ ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಜೊತೆಗೆ ಎದೆ ಮೇಲೆ ಪುನೀತ್ ಅವರ ಟ್ಯಾಟೂ ಹಚ್ಚೆ ಹಾಕಿಸಿಕೊಂಡಿದ್ದಾರೆ. ಇದನ್ನೂ ನೋಡಿ ಸ್ವತಃ ಪುನೀತ್ ರಾಜ್‍ಕುಮಾರ್ ಕೂಡಾ ಫಿದಾ ಆಗಿದ್ದಾರೆ. ಜೊತೆಗೆ ಆ ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ. ಇನ್ನು 'ಭರಾಟೆ' ಚಿತ್ರದ ಶೂಟಿಂಗ್ ಮುಗಿಸಿರುವ ಚೇತನ್ ಕುಮಾರ್ ಕೆಲವು ದಿನಗಳಲ್ಲೇ 'ಜೇಮ್ಸ್' ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ. ಚೇತನ್ ಹೇಳುವ ಪ್ರಕಾರ ಇದು ಅವರ ಬಹಳ ವರ್ಷಗಳ ಕನಸಿನ ಕೂಸಂತೆ. ಈ ವರ್ಷದ ಕೊನೆಯಲ್ಲಿ 'ಜೇಮ್ಸ್' ಚಿತ್ರ ಸೆಟ್ಟೇರುವ ಸಾಧ್ಯತೆ ಇದೆ.