ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅಭಿನಯದ 'ಕೃಷ್ಣ ತುಳಸಿ' ಮೂಲಕ ವಿಭಿನ್ನ ಲವ್ ಸ್ಟೋರಿ ಚಿತ್ರ ನಿರ್ದೇಶನ ಮಾಡಿ ಗಮನ ಸೆಳೆದಿದ್ದ, ನಿರ್ದೇಶಕ ಸುಖೇಶ್ ನಾಯಕ್ ಈಗ ಆ್ಯಕ್ಷನ್ ಸರಕಿನೊಂದಿಗೆ ಹೊಸ ನಟನನ್ನು ಕರೆದುಕೊಂಡು ಗಾಂಧಿನಗರಕ್ಕೆ ಬಂದಿದ್ದಾರೆ.
ರೊಮ್ಯಾಂಟಿಕ್ ಸಿನಿಮಾ ಮೂಲಕ ಸಿನಿ ಪ್ರೇಕ್ಷಕರ ಮನ್ನಣೆ ಪಡೆದಿದ್ದ ನಿರ್ದೇಶಕ ಸುಖೇಶ್ ನಾಯಕ್ ಮುಂದಿನ ಚಿತ್ರ 'ಜಾಗೊ' ಶುಕ್ರವಾರ ಅದ್ದೂರಿಯಾಗಿ ಸೆಟ್ಟೇರಿದೆ. ಕಂಠೀರವ ಸ್ಟುಡಿಯೊದಲ್ಲಿ ನಡೆದ ಮುಹೂರ್ತ ಕಾರ್ಯಕ್ರಮಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಆಗಮಿಸಿ, ಹೀರೊ ಇಂಟ್ರಡಕ್ಷನ್ ಸೀನ್ಗೆ ಕ್ಲಾಪ್ ಮಾಡುವ ಮೂಲಕ ಚಿತ್ರತಂಡಕ್ಕೆ ವಿಶ್ ಮಾಡಿದರು. ಚಿತ್ರದ ಟೈಟಲ್ ವಿಶೇಷವಾಗಿದೆ. ಅಲ್ಲದೆ ಚಿತ್ರ ಬೆಳಗಾವಿ ನೇಟಿವಿಟಿಯಲ್ಲಿದ್ದು ಹೊಸ ಎಕ್ಸ್ಪೆರಿಮೆಂಟ್ ಮಾಡುತ್ತಿದ್ದಾರೆ, ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಅಪ್ಪು ಶುಭಹಾರೈಸಿದರು.
'ಜಾಗೊ' ಪಕ್ಕಾ ಕಮರ್ಷಿಯಲ್ ಚಿತ್ರವಾಗಿದ್ದು ಬೆಳಗಾಂ ನಲ್ಲಿ ನಡೆಯುವ ಕಥೆಯಾಗಿದೆ. ಕಾಲೇಜ್ ಸ್ಟುಡೇಂಟ್ ಹಾಗೂ ರಾಜಕೀಯಕ್ಕೂ ಇರುವ ಲಿಂಕ್ ಅನ್ನು ಇಟ್ಟುಕೊಂಡು ಚಿತ್ರದ ಕಥೆ ಹೆಣೆದಿರುವುದಾಗಿ ನಿರ್ದೇಶಕ ಸುಖೇಶ್ ನಾಯಕ್ ತಿಳಿಸಿದರು. ಇನ್ನೂ ಈ ಚಿತ್ರದಲ್ಲಿ ಹೊಸ ನಟ ವೀರನ್ ಕೇಶವ್ ನಾಯಕನಾಗಿ ನಟಿಸುತ್ತಿದ್ದು ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡು ಅಖಾಡಕ್ಕೆ ಇಳಿದಿದ್ದಾರಂತೆ.
ಈಗಾಗಲೇ ಮುಂಬೈನಲ್ಲಿ ಅನುಪಮ್ ಖೇರ್ ಇನ್ಸ್ಟಿಟ್ಯೂಟ್ ನಲ್ಲಿ ಆ್ಯಕ್ಟಿಂಗ್ ಕೋರ್ಸ್ ಮುಗಿಸಿ ಚಿತ್ರದ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿದ್ದು, ಅಪ್ಪು ಅಭಿನಯದ 'ಯುವ ರತ್ನ' ಚಿತ್ರದಲ್ಲಿ ಒಂದು ಸಣ್ಣ ಪಾತ್ರ ಮಾಡಿ ಸದ್ಯ ಜಾಗೊ ಚಿತ್ರದ ಮೂಲಕ ನಾಯಕನಾಗಿ ಕಾಣಿಸ್ತಿದ್ದೇನೆ ಎಂದು ವೀರನ್ ಹೇಳಿದರು.
ಚಿತ್ರವನ್ನು ವೀರನ್ ಅವರ ತಂದೆ ನಿರ್ಮಾಣ ಮಾಡುತ್ತಿದ್ದು, ಸುಮಾರು 25 ಕಥೆಗಳನ್ನು ಕೇಳಿದ ನಂತರ ಈ ಚಿತ್ರದ ಕಥೆ ಇಷ್ಟವಾಗಿ ನಿರ್ಮಾಣ ಮಾಡುತ್ತಿರುವುದಾಗಿ ನಿರ್ಮಾಪಕ ಶಿವಪ್ಪ ತಿಳಿಸಿದರು. ಸದ್ಯ ಚಿತ್ರಕ್ಕೆ ನಾಯಕಿ ಹುಡುಕಾಟದಲ್ಲಿ ಚಿತ್ರತಂಡ ಬ್ಯುಸಿಯಾಗಿದ್ದು, ನಾಯಕಿ ಫೈನಲ್ ಮಾಡಿಕೊಂಡು ಮುಂದಿನ ತಿಂಗಳಿನಿಂದ ಶೂಟಿಂಗ್ ಶುರು ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.