ಪ್ಯಾನ್ ಇಂಡಿಯಾ ಚಿತ್ರಗಳು ಕನ್ನಡ ಚಿತ್ರರಂಗಕ್ಕೆ ಮಾರಕವಾಗಿ ಪರಿಣಮಿಸುತ್ತಿವೆ ಎಂಬ ಜಗ್ಗೇಶ್ ಅವರ ಮಾತುಗಳು ಕನ್ನಡ ಚಿತ್ರರಂಗದಲ್ಲೇ ಬಿರುಗಾಳಿ ಎಬ್ಬಿಸಿದೆ. ಇದರಿಂದ ಯಶ್, ಸುದೀಪ್ ಸೇರಿದಂತೆ ಹಲವು ಸ್ಟಾರ್ ನಟರ ಅಭಿಮಾನಿಗಳು ಜಗ್ಗೇಶ್ ವಿರುದ್ಧ ತಿರುಗಿಬಿದ್ದಿದ್ದು, ಜಗ್ಗೇಶ್ ಅವರಿಗೆ ಬಾಯಿಗೆ ಬಂದಂತೆ ನಿಂದಿಸುತ್ತಿದ್ದಾರೆ. ಅದರಲ್ಲೂ ಜಗ್ಗೇಶ್ ಅವರ ಟ್ವೀಟ್‍ಗಳಿಗೆ ಸಾಕಷ್ಟು ಜನ ಕಾಮೆಂಟ್ ಮಾಡುತ್ತಿದ್ದು, ಅವರನ್ನು ಉಗ್ರವಾಗಿ ಟೀಕಿಸುತ್ತಿದ್ದಾರೆ.
ಜಗ್ಗೇಶ್ ಅವರಿಗೆ ಹಲವರು ಬಕೆಟ್ ಹಿಡಿಯುವವರು ಎಂದು ಮೂದಲಿಸಿದ್ದಾರೆ. ಅದಕ್ಕೆ ಕಾರಣ, ಜಗ್ಗೇಶ್ ಅವರು ಒಂದು ಟ್ವೀಟ್‍ನಲ್ಲಿ,`ಕನ್ನಡ ಚಿತ್ರರಂಗ, ಬೆಳೆಯುವ ನಟ-ನಟಿಗಾಗಿ ಆಡಿದ ಮಾತಿಗೆ ಹೀಗಾ? ಪರವಾಗಿಲ್ಲ, ಮಕ್ಕಳು ಎಷ್ಟು ಬೆಳೆದರೂ ತಂದೆ-ತಾಯಿಯ ಮುಂದೆ ಮಕ್ಕಳೇ ವಿನಃ ತಂದೆಯಾಗಲ್ಲ. ಶಿವಣ್ಣ, ಪುನೀತ್, ದರ್ಶನ್, ಗಣೆಶ್, ವಿಜಯ್ ಪ್ಯಾನ್ ಇಂಡಿಯಾ ನಂಬದೆ ಕನ್ನಡ, ಕನ್ನಡಿಗರ ಸೀಮೆಯಲ್ಲಿ ಕನ್ನಡ ಕಲಾವಿದ, ತಂತ್ರಜ್ಞರ ಬೆಳೆಸಿ ತಾವು ಇದ್ದಾರೆ. ಅವರ ಜತೆಗೆ ನಾನೂ ಇರುವೆ. ನಮಗೆ 100 ಪರ್ಸೆಂಡ್ ಕನ್ನಡ ಜನ ಸಾಕು' ಎಂದು ಬರೆದುಕೊಂಡಿದ್ದಾರೆ.
ಈ ಪೈಕಿ ದರ್ಶನ್ ಮತ್ತು ಪುನೀತ್ ಚಿತ್ರಗಳು ಸಹ ಪ್ಯಾನ್ ಇಂಡಿಯಾ ಬಿಡುಗಡೆಯಾಗಿರುವುದರಿಂದ ಅವರನ್ನು ಮಾತ್ರ ಬಿಟ್ಟು, ಬೇರೆಯವರ ಬಗ್ಗೆ ಜಗ್ಗೇಶ್ ಮಾತನಾಡಿದ್ದು ಸರಿಯಲ್ಲ ಎಂಬುದು ಹಲವರ ಅಭಿಪ್ರಾಯ. ಅದೇ ಕಾರಣಕ್ಕೆ, ಜಗ್ಗೇಶ್ ಕೆಲವರಿಗೆ ಬಕೆಟ್ ಹಿಡಿದು ತಮ್ಮ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಜಗ್ಗೇಶ್,`ಎಲ್ಲರ ತಂದೆ-ತಾಯಿ ಬಕೆಟ್ ಹಿಡಿದೇ ಅವರ ಮಕ್ಕಳನ್ನು ಬೆಳೆಸಿರುತ್ತಾರೆ. ಪಾಪ, ಯೌವ್ವನದ ಪೊರೆ ಬಂದಾಗ, ಬಿಟ್ಟಿ ಅನ್ನ ತಿನ್ನುವಾಗ ಬಕೆಟ್ ಅರಿವಾಗದು. ತನ್ನ ಸ್ವಂತ ಅನ್ನ ಗಿಟ್ಟಿಸುವಾಗ ಅವರ ಅಪ್ಪ-ಅಮ್ಮ ಹಿಡಿದ ಬಕೆಟ್ ಅವರ ಕೈ ಸೇರುವುದು. ಆಗ ಬಕೆಟ್ ಬೆಲೆ ಅರಿವಾಗುವುದು. ಬೆಳಗ್ಗೆ ಎದ್ದಾಗ, ಹಾಗಾದರೆ ಇವರು ಬಕೆಟ್ ಬಳಸದೆ ತೊಳೆಯಲು ಮಕ್ಕಳಂತೆ ಅಮ್ಮನನ್ನು ಕರೆಯಬಹುದಾ?' ಎಂದು ಜಗ್ಗೇಶ್ ತಮ್ಮ ಕಾಲೆಳೆದವರಿಗೆ ಉತ್ತರ ಕೊಟ್ಟಿದ್ದಾರೆ.
ಬಕೆಟ್ ಹಿಡಿಯೋನು ಅಂತ ಕೆಲವರು ಜಗ್ಗೇಶ್‍ಗೆ ಹೇಳಿದ್ದು ಯಾಕೆ?
ಪ್ಯಾನ್ ಇಂಡಿಯಾ ಸಂಸ್ಕೃತಿಯು ಕನ್ನಡ ಚಿತ್ರರಂಗವನ್ನು ಹಾಳು ಮಾಡುತ್ತಿದೆ ಎಂದು ಹಿರಿಯ ನಟ ಜಗ್ಗೇಶ್ ಹೇಳಿದ್ದರ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ. ಟೀಕೆಗಳು ಬಂದಿರುವುದು ಪರಭಾಷೆಗಳಿಂದಲ್ಲ, ಸ್ವತಃ ಕನ್ನಡಿಗರಿಂದಲೇ.. ಕನ್ನಡದ ಟಾಪ್ ನಟರ ಅಭಿಮಾನಿಗಳೆಲ್ಲಾ ಜಗ್ಗೇಶ್ ವಿರುದ್ಧ ತಿರುಗಿಬಿದ್ದಿದ್ದಾರೆ. ಜಗ್ಗೇಶ್ ಹೇಳಿದಂತೆ ಪ್ಯಾನ್ ಇಂಡಿಯಾ ಸಂಸ್ಕೃತಿ ಇಲ್ಲದಿದ್ದರೆ, ಕನ್ನಡ ಚಿತ್ರಗಳನ್ನು ಮತ್ತು ಕನ್ನಡದ ನಟರನ್ನು ಬೇರೆ ರಾಜ್ಯಗಳಿಗೆ ಮತ್ತು ಭಾಷೆಗಳಲ್ಲಿ ಗುರುತಿಸುವುದಕ್ಕೆ ಸಾಧ್ಯವೇ ಇಲ್ಲ ಎಂಬುದು ಅವರೆಲ್ಲರ ಅಭಿಪ್ರಾಯವಾಗಿದೆ.
ಇನ್ನು ಕೆಲವರು, ಜಗ್ಗೇಶ್ ಕೆಲವು ನಟರ ಬಕೆಟ್ ಹಿಡಿಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅದಕ್ಕೆ ಕಾರಣವೂ ಇದೆ. ಸೋಷಿಯಲ್ ಮೀಡಿಯಾದಲ್ಲಿ ಜಗ್ಗೇಶ್ ಅವರು ತಮ್ಮ ಅಭಿಪ್ರಾಯ ಹಂಚಿಕೊಳ್ಳುವ ಸಂದರ್ಭದಲ್ಲಿ ಪುನೀತ್, ದರ್ಶನ್ ಮುಂತಾದವರು ಯಾವತ್ತು ಕನ್ನಡಪರ ಎಂದು ಹೇಳಿಕೊಂಡಿದ್ದಾರೆ. ಪುನೀತ್ ಅಭಿನಯದ`ಯುವರತ್ನ' ಇದೀಗ ತೆಲುಗಿನಲ್ಲೂ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.
ಇನ್ನು ದರ್ಶನ್ ಅಭಿನಯದ`ಕುರುಕ್ಷೇತ್ರ' ಸಹ ಕನ್ನಡವಲ್ಲದೆ ಇನ್ನೂ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಈ ಮೂಲಕ ಪ್ಯಾನ್ ಇಂಡಿಯಾ ಚಿತ್ರವಾಗಿದೆ. ಹೀಗೆ ಪುನೀತ್ ಮತ್ತು ದರ್ಶನ್ ಅವರನ್ನು ಬಿಟ್ಟು, ಜಗ್ಗೇಶ್ ಬೇರೆಯವರ ಮೇಲೆ ಮಾತ್ರ ಗೂಬೆ ಕೂರಿಸುವುದಕ್ಕೆ ಹೊರಟಿದ್ದಾರೆ ಎಂಬುದು ಹಲವರ ಆರೋಪ.
ಬರೀ ಗೂಬೆ ಕೂರಿಸುವುದಷ್ಟೇ ಅಲ್ಲ, ಕೆಲವು ನಟರಿಗೆ ಜಗ್ಗೇಶ್ ಅವರು ಬಕೆಟ್ ಹಿಡಿದು ಹತ್ತಿರವಾಗುವುದಕ್ಕೆ ಹೊರಟಿದ್ದಾರೆ ಎಂದು ಕೆಲವು ಸ್ಟಾರ್ ನಟರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಪ್ಯಾನ್ ಇಂಡಿಯಾದಿಂದ ಹೇಗೆ ಕನ್ನಡ ಚಿತ್ರಗಳು ಬೇರೆ ಭಾಷೆಗಳಲ್ಲಿ ಬಿಡುಗಡೆಯಾಗುತ್ತದೋ, ಅದೇ ರೀತಿ ಬೇರೆ ಭಾಷೆಯವರ ಚಿತ್ರಗಳು ಡಬ್ ಆಗಿ ಕನ್ನಡದಲ್ಲೂ ಬಿಡುಗಡೆಯಾಗುತ್ತವೆ. ನಮ್ಮವರು ಮಾತ್ರ ಬೇರೆ ಭಾಷೆಗಳಲ್ಲಿ ಮಿಂಚಬೇಕು, ಬೇರೆಯವರು ಇಲ್ಲಿ ಬರಬಾರದು ಎಂದರೆ ಹೇಗೆ ಎಂಬುದು ಹಲವರ ಪ್ರಶ್ನೆ. ಈ ಪ್ರಶ್ನೆಗೆ ಜಗ್ಗೇಶ್ ಏನು ಹೇಳುತ್ತಾರೋ ನೋಡಬೇಕು.