ಕನ್ನಡ ಚಿತ್ರರಂಗ ಅಲ್ಲದೆ ಭಾರತೀಯ ಚಿತ್ರರಂಗದ ಏಕ ಕಾಲಕ್ಕೆ ನವರಸಗಳ ಅಭಿನಯ ಮಾಡುವ ಏಕೈಕ ನಟ ಜಗ್ಗೇಶ್. ಸಹ ನಿರ್ದೇಶಕನಾಗಿ, ಸಹ ಕಲಾವಿದನಾಗಿ ಹೀರೋ ಆಗಿ ಬೆಳ್ಳಿ ತೆರೆ ಮೇಲೆ ವಿಜೃಂಭಿಸಿದ ಜಗ್ಗೇಶ್, 1980 ನವೆಂಬರ್ 17ಕ್ಕೆ ಚಿತ್ರರಂಗ ಪ್ರವೇಶ ಮಾಡಿ 40 ವರ್ಷ ಪೂರೈಯಿಸಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ 'ಭಂಡ ನನ್ನ ಗಂಡ'ನಾಗಿ ಜಗ್ಗೇಶ್ ಸ್ಟಾರ್ ಹೀರೊ ಆಗಿದ್ದೇ ಈಗ ಒಂದು ಇತಿಹಾಸ. ಆದರೆ, ಚಿತ್ರರಂಗದ ಯಾವುದೇ ಗಂಧನೇ ಗೊತ್ತಿಲ್ಲದ ಜಗ್ಗೇಶ್ ನವರಸ ನಾಯಕನೆಂದು ಹೆಸರು ಮಾಡಿರೋದು ಕೂಡ ಸಿನಿಮಾದ ಕಥೆಗಿಂತಲೂ ಕಡಿಮೆಯೇನಿಲ್ಲ.
ಈ ನಲವತ್ತು ವರ್ಷದ ಸಿನಿಮಾ ಜರ್ನಿ ಬಗ್ಗೆ ಹಂಚಿಕೊಳ್ಳಲು ಜಗ್ಗೇಶ್ ಮಾಧ್ಯಮದ ಮುಂದೆ ಬಂದಿದ್ರು. ಹೀರೊ ಅಂದ್ರೆ ಹೀಗೇ ಇರಬೇಕು ಅಂದುಕೊಂಡಿದ್ದ ಕಾಲದಲ್ಲಿ ಜಗ್ಗೇಶ್ ಸಣ್ಣ ಸಣ್ಣ ಪಾತ್ರಗಳನ್ನ ಮಾಡ್ತಾ, ಶಿವರಾಜ್ ಕುಮಾರ್, ರವಿಚಂದ್ರನ್ ಹಾಗೂ ಅಂಬರೀಶ್ ತರದ ಸ್ಟಾರ್ ನಟನಾಗಲು ಪಟ್ಟ ಕಷ್ಟಗಳು, ಎದುರಿಸಿದ ಅವಮಾನಗಳು ಸಾಕಷ್ಟಿವೆ. ಸಾಕಷ್ಟು ಏಳು ಬೀಳುಗಳ ನಡೆವೆಯೂ ಎದ್ದು ನಿಂತಿರೋವಂತೆ ಮಾಡಿರೋದೇ ಜಗ್ಗೇಶ್ ಅವರಲ್ಲಿರೋ ಪ್ರತಿಭೆ.
ಕನ್ನಡದಲ್ಲಿ 140ಕ್ಕೂ ಹೆಚ್ಚು ಸಿನಿಮಾಗಳನ್ನ ಮಾಡಿರುವ ಜಗ್ಗೇಶ್ಗೆ, ಸಿನಿಮಾ ಇಂಡಸ್ಟ್ರಿಗೆ ಬರೋದಿಕ್ಕೆ ಮುಖ್ಯ ಕಾರಣ ರವಿಚಂದ್ರನ್ ತಂದೆ ವೀರಸ್ವಾಮಿ. ರವಿಚಂದ್ರನ್ ಅವರ ರಣಧೀರ ಎಂಬ ಸಿನಿಮಾ ನಿರ್ಮಾಣ ಮಾಡಿದಾಗ, ರವಿಚಂದ್ರನ್ ಗೆಳೆಯರ ಪಾತ್ರಗಳಲ್ಲಿ ಒಬ್ಬರಾಗಿ ಜಗ್ಗೇಶ್ ನಟಿಸಿದ್ರು.
ಚಿತ್ರರಂಗದಲ್ಲಿ ನಾಲ್ಕು ದಶಕಗಳನ್ನ ಪೂರೈಸಿರುವ ಜಗ್ಗೇಶ್, ಸಿನಿಮಾ ಜರ್ನಿಯಲ್ಲಿ ಒಂದೊಂದೇ ಕಷ್ಟದ ಮೆಟ್ಟಿಲುಗಳನ್ನ ಹತ್ತಿಕೊಂಡು ಮೇಲೆ ಬರಲು ಮುಖ್ಯ ಕಾರಣ ಅವ್ರರಲ್ಲಿದ್ದ ಆತ್ಮ ವಿಶ್ವಾಸ. ಜಗ್ಗೇಶ್ ಸಿನಿಮಾ ಕೆರಿಯರ್ನಲ್ಲಿ ದೊಡ್ಡ ತಿರುವುಗಳನ್ನ ಕೊಟ್ಟ ಎರಡು ಸೂಪರ್ ಹಿಟ್ ಸಿನಿಮಾಗಳು ಅಂದ್ರೆ ಒಂದು ಶಿವರಾಜ್ ಕುಮಾರ್ ಅಭಿನಯದ ರಣರಂಗ, ಮತ್ತೊಂದು ದ್ವಾರಕೀಶ್ ನಿರ್ದೇಶನ ಹಾಗೂ ನಿರ್ಮಾಣದ ಕೃಷ್ಣ ನೀ ಕುಣಿದಾಗ ಚಿತ್ರ.
ಆ ದಿನಗಳಲ್ಲಿ ಜಗ್ಗೇಶ್ ರಣರಂಗ ಸಿನಿಮಾದಲ್ಲಿ ಅಭಿನಯಿಸೋದಕ್ಕೆ ಮುಖ್ಯ ಕಾರಣ ಶಿವರಾಜ್ ಕುಮಾರ್. ಇನ್ನು ಕೃಷ್ಣ ನೀ ಕುಣಿದಾಗ ಚಿತ್ರದಲ್ಲಿ ಅವಕಾಶ ಕೊಟ್ಟಿದ್ದು ದ್ವಾರಕೀಶ್.
ಈ ಎರಡು ಸಿನಿಮಾಗಳಿಂದ ಜಗ್ಗೇಶ್ ಅದೃಷ್ಟ ಖುಲಾಯಿಸಿ. ಆ ಕಾಲದಲ್ಲೇ ಎರಡು ಲಕ್ಷ ಸಂಭಾವನೆ ಪಡೆಯುವ ಬೇಡಿಕೆಯ ನಟನಾಗಿ ಹೊರ ಹೊಮ್ಮಿದ್ರಂತೆ ಜಗ್ಗೇಶ್. ಹೀಗೆ ರವಿಚಂದ್ರನ್, ಶಿವರಾಜ್, ಅಂಬರೀಶ್, ಟೈಗರ್ ಪ್ರಭಾಕರ್, ದೊಡ್ಡಣ್ಣ, ದೇವರಾಜ್, ಶಶಿಕುಮಾರ್ ಹೀಗೆ ಅವತ್ತಿನ ಎಲ್ಲಾ ನಟರ ಜೊತೆ ಅಭಿನಯಿಸಿದ ಹೆಗ್ಗಳಿಕೆ ಜಗ್ಗೇಶ್ ಅವರಿಗೆ ಸಲ್ಲುತ್ತದೆ.
ಇನ್ನು ಜಗ್ಗೇಶ್ ಜೀವನದಲ್ಲಿ ಬಹು ದೊಡ್ಡ ಕೊಡುಗೆ ಅಂದ್ರೆ ಅಂಬರೀಶ್. ಯಾಕೆಂದರೆ, ಬೇಡಿಕೆಯ ಸಹ ಕಲಾವಿದನಾಗಿದ್ದ ಜಗ್ಗೇಶ್, ಹೀರೊ ಆಗೋದಿಕ್ಕೆ ಮುಖ್ಯ ಕಾರಣವೇ ಮಂಡ್ಯದ ಗಂಡು ಅಂಬರೀಶ್. ಈ ಸ್ನೇಹದಿಂದಲೇ ಭಂಡ ನನ್ನ ಗಂಡ ಸಿನಿಮಾದಲ್ಲಿ ಒಂದು ಗೆಸ್ಟ್ ಪಾತ್ರ ಮಾಡಿ, ಈ ಸಿನಿಮಾ ಬಿಡುಗಡೆ ಮಾಡೋದಿಕ್ಕೆ ಮುಖ್ಯ ಕಾರಣ ಅಂಬರೀಶ್ ಎನ್ನುತ್ತಾರೆ ಜಗ್ಗೇಶ್.
ಈ ಸಿನಿಮಾ ಆವತ್ತಿನ ಕಾಲದಲ್ಲಿ 70 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿತ್ತಂತೆ. ಈ 70ಲಕ್ಷ ರೂಪಾಯಿ ಆ ಕಾಲಕ್ಕೆ 10ಕೋಟಿಗೆ ಸಮ ಅಂತಾ ಜಗ್ಗೇಶ್ ಹೇಳಿದ್ದಾರೆ. ಅಲ್ಲದೆ ಜಗ್ಗೇಶ್ ನಲವತ್ತು ವರ್ಷದ ಸಿನಿಮಾ ಪಯಣದಲ್ಲಿ ಡಾ ರಾಜ್ ಕುಮಾರ್ ಅವ್ರ ಪ್ರಭಾವ ಕೂಡ ಜಾಸ್ತಿ ಇದೆ ಎಂದು ಹೇಳಿಕೊಂಡಿದ್ದಾರೆ.