ನವರಸ ನಾಯಕ ಜಗ್ಗೇಶ್ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ಆಕ್ಟೀವ್ ಆಗಿರುವ ಕನ್ನಡದ ನಟ. ಇದೀಗ ಆಟೋ ರಾಜನಾಗಿ ತಾವು ಆಟೋ ಚಲಾಯಿಸುವ ದೃಶ್ಯವನ್ನು ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡುವ ಮೂಲಕ ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ. ಆಟೋ ಚಲಾಯಿಸುತ್ತ ಮಾತನಾಡಿರುವ ಜಗ್ಗೇಶ್, ಅಪ್ಪ ಬೈದ ಕಾರಣ ಮನೆ ಬಿಟ್ಟು ಹೋಗಿ ಮೈಸೂರಿನಲ್ಲಿ ಆಟೋ ಓಡಿಸಿದೆ. ಇದು ನಡೆದದ್ದು 1970-1980ನೇ ಇಸವಿಯಲ್ಲಿ ಎಂದು ಸ್ವತಃ ಜಗ್ಗೇಶ್ ಹೇಳಿಕೊಂಡಿದ್ದಾರೆ.
ಇನ್ನು ಆ ಕಾಲದಲ್ಲಿ ಜಗ್ಗೇಶ್ಗೆ ಒಂದು ಆಸೆ ಇತ್ತಂತೆ. ಅದೇನೆಂದರೆ ತಾನು ಒಂದು ಆಟೋದ ಮಾಲೀಕನಾಗಿ ದಿನಕ್ಕೆ 100 ರೂಪಾಯಿ ದುಡಿಯಬೇಕೆಂದು.
ಈ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿರುವ ಜಗ್ಗೇಶ್, ಬದುಕಿಗೆ ಬುದ್ಧಿ ಹೇಳುವ ಅಪ್ಪ ಅಂದು ಶತ್ರುವಂತೆ ಕಂಡರು. ಇಂದು ಆಕಸ್ಮಿಕ ಒಬ್ಬ ಆಟೋರಿಕ್ಷಾ ಸಹೋದರ ಸಿಕ್ಕಾಗ ಅವನ ಅನುಮತಿ ಪಡೆದು ಆಟೋ ಓಡಿಸಿದೆ. ಅಪ್ಪ ಹಾಗು ನನ್ನ ಮನಸ್ತಾಪದ ದಿನಗಳು ನೆನಪಾಗಿ ಅಪ್ಪ ಎಂಥ ಶ್ರೇಷ್ಟ ಎನಿಸಿತು. ಮಗ ನಾನು ಎಂಥ ಅಧಮ ಎನಿಸಿತು. ಈ ವ್ಯತ್ಯಾಸ ನನ್ನ ತಲೆ ತಗ್ಗಿಸುವಂತೆ ಮಾಡಿತು. ಮಗ ಬದುಕು ಕಲಿಯಲಿ ಎಂದು ಅಪ್ಪ ಆಡಿದ ಮಾತೆಲ್ಲಾ ಅಣಕ ಅಪಮಾನದಂತೆ ಕೇಳುತ್ತಿತ್ತು ಅಂದು. ಈಗ ನೀವು ಬೈದು ಬುದ್ಧಿ ಹೇಳುತ್ತಿದ್ದ ಮಗ ತಾತನಾಗಿ ಬದುಕಿನ ಪುಟಗಳ ಮೆಲುಕುಹಾಕಿದಾಗ, ಅಪ್ಪ ಎಂಥ ಶ್ರೇಷ್ಠ ಮನುಜ ನೀನು ಅನಿಸುತ್ತಿದೆ. ತಪ್ಪಾಯಿತು ಕ್ಷಮಿಸಿ ಅಂದರು ಕೇಳದಷ್ಟು ದೂರದ ಊರಿಗೆ ಹೋಗಿಬಿಟ್ಟೆ. ಕ್ಷಮೆ ಕೇಳಲು ನಾನು ನೀನಿರುವ ಜಾಗಕ್ಕೆ ಬರಬೇಕು. ಇನ್ನು ಅನೇಕ ಕಾರ್ಯವಿದೆ ಮುಗಿಸಿ ನಿನ್ನಲ್ಲಿಗೆ ಬರುವೆ. ಆಗಲಾದರು ನನ್ನನ್ನು ಕ್ಷಮಿಸು. ಎಷ್ಟೇ ಆದರು ನಾನು ನಿನ್ನ ಮಗನಲ್ಲವೆ ಎಂದು ಭಾವುಕತೆಯಿಂದ ಬರೆದುಕೊಂಡಿದ್ದಾರೆ.
love you pa..ever loving son. ತಂದೆ-ತಾಯಿ ನಡೆದಾಡುವ ದೇವರು ಬದುಕಿದ್ದಾಗಲೆ ಗೌರವಿಸಿ. ಕಳೆದುಕೊಂಡ ಮೇಲೆ ಪರಿತಪಿಸಿದರು ಮತ್ತೆ ಸಿಗರು ಎಂದು ಪೋಸ್ಟ್ ಮಾಡಿದ್ದಾರೆ.