ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯದ 'ಐ ಲವ್ ಯು' ಸಿನಿಮಾ ಜೂನ್ 14 ರಂದು ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.
ಆರ್. ಚಂದ್ರು ನಿರ್ದೇಶನದ ಸಿನಿಮಾ ಬಿಡುಗಡೆಗೂ ಮುನ್ನ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಭರ್ಜರಿ ತೆಲುಗು ಆಡಿಯೋ ಸಮಾರಂಭ ನಡೆಸಲು ಚಿತ್ರತಂಡ ತೀರ್ಮಾನಿಸಿದೆ. ಅದೇ ವೇದಿಕೆಯಲ್ಲಿ ಟ್ರೇಲರ್ ಕೂಡಾ ಬಿಡುಗಡೆಯಾಗಲಿದೆ. ಜೂನ್ 8 ರಂದು ಈ ಧ್ವನಿ ಸುರುಳಿ ಹಾಗೂ ಎರಡು ಭಾಷೆಯ ಟ್ರೈಲರ್ ಬಿಡುಗಡೆಯಾಗಲಿದ್ದು ಕಾರ್ಯಕ್ರಮದಲ್ಲಿ ಭಾಗವಹಿಸಲು ತೆಲುಗು ನಟರಿಗೆ ಆಹ್ವಾನ ನೀಡಲಾಗುವುದು ಎಂದು ಚಿತ್ರತಂಡ ಹೇಳಿದೆ. ದಾವಣಗೆರೆಯಲ್ಲಿ ಮಾರ್ಚ್ 8 ರಂದು ‘ಐ ಲವ್ ಯು’ ಚಿತ್ರದ ಮೂರು ಹಾಡುಗಳ ಅನಾವರಣ ಮಾಡಲಾಗಿತ್ತು.
ಇನ್ನು ಆಂಧ್ರ ಹಾಗೂ ತೆಲಂಗಾಣದಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಮಾಪಕ ದಿಲ್ರಾಜು ಹಕ್ಕುಗಳನ್ನು ಪಡೆದಿದ್ದಾರೆ. ಉಪೇಂದ್ರ ಅವರೇ ಅಭಿನಯಿಸಿರುವ ‘ಎ’ ಹಾಗೂ ‘ಉಪೇಂದ್ರ’ ಚಿತ್ರಗಳ ಸ್ಫೂರ್ತಿಯಿಂದ ‘ಐ ಲವ್ ಯು’ ಚಿತ್ರಕಥೆಯನ್ನು ನಿರ್ದೇಶಕ ಆರ್.ಚಂದ್ರು ಅವರು ಬರೆದಿದ್ದಾರೆ ಎನ್ನಲಾಗಿದೆ.