ನವದೆಹಲಿ: ಉದ್ಯಮಿ ಮುಸ್ತಫಾ ರಾಜ್ ಹಾಗೂ ನಟಿ ಪ್ರಿಯಾಮಣಿ ಮದುವೆ ಕಾನೂನು ಪ್ರಕಾರ ಅಸಿಂಧುವಾಗಿದ್ದು, ಈಗಲೂ ಅವರು ನನಗೆ ಗಂಡ ಎಂದು ಮೊದಲ ಪತ್ನಿ ಆಯೆಷಾ ಹೇಳಿದ್ದು, ಇಬ್ಬರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು ಮಾಡಿದ್ದಾರೆ.
ಮುಸ್ತಾಫಾ ರಾಜ್ ನನಗೆ ಈವರೆಗೆ ಕಾನೂನಾತ್ಮಕವಾಗಿ ವಿಚ್ಛೇದನ ನೀಡಿಲ್ಲ. ಹೀಗಾಗಿ ಈಗಲೂ ಅವರು ನನಗೆ ಗಂಡ. ಇದರ ಮಧ್ಯೆ ಪ್ರಿಯಾಮಣಿ ಜೊತೆ ಮದುವೆ ಮಾಡಿಕೊಂಡಿದ್ದು, ಅದು ಕಾನೂನು ಬಾಹಿರವಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಮುಸ್ತಾಫಾ ಹಾಗೂ ಆಯೆಷಾ 2013ರಲ್ಲಿ ಮದುವೆ ಮಾಡಿಕೊಂಡಿದ್ದಾರೆ. ಇದಾದ ಬಳಿಕ ದಾಂಪತ್ಯದಲ್ಲಿ ಬಿರುಕು ಮೂಡಿದ್ದು ಮುಸ್ತಾಫಾ ಮೊದಲ ಪತ್ನಿಯಿಂದ ದೂರವಾಗಿ, 2017ರಲ್ಲಿ ಪ್ರಿಯಾಮಣಿ ಅವರನ್ನು ವರಿಸಿದ್ದರು.
ಇದನ್ನೂ ಓದಿರಿ: ಮುಖ್ಯಮಂತ್ರಿ ಸ್ಥಾನಕ್ಕೆ ಯಾರನ್ನೂ ಶಿಫಾರಸ್ಸು ಮಾಡಿಲ್ಲ: ಬಿಎಸ್ವೈ
ಮುಸ್ತಾಫಾ ಮತ್ತು ನಾನು ವಿಚ್ಛೇದನ ಪಡೆದುಕೊಳ್ಳಲು ಅರ್ಜಿ ಹಾಕಿಲ್ಲ. ಜತೆಗೆ ಪ್ರಿಯಾಮಣಿ ಜೊತೆ ಮದುವೆ ಮಾಡಿಕೊಳ್ಳುವ ಸಂದರ್ಭದಲ್ಲಿ ತಾವು ಬ್ಯಾಚುಲರ್ ಎಂದು ಕೋರ್ಟ್ನಲ್ಲಿ ಹೇಳಿಕೊಂಡಿದ್ದಾರೆ ಎಂದು ಆಯೆಷಾ ಆರೋಪ ಮಾಡಿದ್ದಾರೆ. ತಮಗೆ ಎರಡು ಮಕ್ಕಳಿದ್ದು, ನಮ್ಮ ನಮ್ಮಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಲು ಮುಂದಾಗಿ ಇಷ್ಟು ದಿನ ಸುಮ್ಮನಿದ್ದೆ ಎಂದು ಹೇಳಿದ್ದಾರೆ.
ಪ್ರಿಯಾಮಣಿ ಹೇಳಿದ್ದೇನು?
ತಮ್ಮ ಮೇಲೆ ಕೇಳಿ ಬಂದಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಿಯಾಮಣಿ, ನಮ್ಮಿಬ್ಬರ ನಡುವೆ ಸುರಕ್ಷಿತ ಸಂಬಂಧವಿದೆ. ಆಯೆಷಾ ಮಾಡಿರುವ ಆರೋಪದಲ್ಲಿ ಯಾವುದೇ ರೀತಿಯ ಹುರುಳಿಲ್ಲ. ಸದ್ಯ ಅವರು ಯುಎಸ್ನಲ್ಲಿದ್ದು, ಪ್ರತಿದಿನ ಇಬ್ಬರು ಮಾತನಾಡುತ್ತೇವೆ ಎಂದಿದ್ದಾರೆ. ಆಯೆಷಾ ಹಣಕ್ಕಾಗಿ ಮೇಲಿಂದ ಮೇಲೆ ಪೀಡಿಸಿದ್ದು, ಅದಕ್ಕೋಸ್ಕರ ಇಷ್ಟು ದಿನ ಸುಮ್ಮನಿದ್ದು, ಇದೀಗ ಕ್ರಿಮಿನಲ್ ಕೇಸ್ ದಾಖಲು ಮಾಡಿದ್ದಾರೆ ಎಂದಿದ್ದಾರೆ.
ಕನ್ನಡದ ಅನೇಕ ಚಿತ್ರಗಳಲ್ಲಿ ನಟನೆ ಮಾಡಿರುವ ಪ್ರಿಯಾಮಣಿ ಸದ್ಯ ಮನೋಜ್ ಬಾಜಪೇಯ್ ಅವರ ದಿ ಫ್ಯಾಮಿಲಿ ಮ್ಯಾನ್-2 ವೆಬ್ ಸಿರೀಸ್ನಲ್ಲಿ ನಟನೆ ಮಾಡಿದ್ದಾರೆ.