ಅಚ್ಚ ಕನ್ನಡ ಭಾಷೆಯಲ್ಲಿ ನಿರೂಪಣೆ ಮಾಡಿ ಕಿರುತೆರೆ ಪ್ರಿಯರ ಮನಗೆದ್ದ ಅಪರ್ಣಾ ನಟಿ ಎನ್ನುವುದಕ್ಕಿಂತಲೂ ನಿರೂಪಕಿಯಾಗಿ ಗಮನ ಸೆಳೆದವರು. ವಿಭಿನ್ನ ಶೈಲಿಯ ನಿರೂಪಣೆ ಮೂಲಕ ಗಮನ ಸೆಳೆದಿರುವ ಅಪರ್ಣಾ ಧ್ವನಿಗೆ ಮನ ಸೋಲದವರಿಲ್ಲ. ಅದರಲ್ಲೂ ಮಹಾನಗರಿ ಬೆಂಗಳೂರಿನಲ್ಲಿ ಪ್ರತಿ ದಿನ ಮೆಟ್ರೋ ರೈಲಿನಲ್ಲಿ ಓಡಾಡುವ ಜನರಿಗೆ ಅವರ ಧ್ವನಿ ಮತ್ತಷ್ಟು ಹತ್ತಿರ. ಮೆಟ್ರೋದಲ್ಲಿ ಕಿವಿಗೆ ಬೀಳುವ ಅಚ್ಚಕನ್ನಡದ, ಮುದ್ರಿತ ಧ್ವನಿ ಅಪರ್ಣಾ ಅವರದ್ದೇ.
ನಿರೂಪಣೆಯ ಹೊರತಾಗಿ ಅಪರ್ಣಾ ಅವರು ಫೇಮಸ್ ಆದದ್ದು ಮಜಾ ಟಾಕೀಸ್ ಮೂಲಕ. ಮಜಾ ಟಾಕೀಸ್ನಲ್ಲಿ ರಾಣಿ ಅಕ್ಕ ವರಲಕ್ಷ್ಮಿಯಾಗಿ ಕಾಣಿಸಿಕೊಂಡಿರುವ ಅಪರ್ಣಾ ಇದೀಗ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಇವಳು ಸುಜಾತಾ' ಧಾರಾವಾಹಿಯಲ್ಲಿ ನಾಯಕ ಪಾರ್ಥನ ಅಮ್ಮನ ಪಾತ್ರಕ್ಕೆ ಜೀವ ತುಂಬುತ್ತಿರುವ ಅಪರ್ಣಾ ಈ ಮೊದಲು ಮೂಡಲಮನೆ, ಪ್ರೀತಿ ಇಲ್ಲದ ಮೇಲೆ, ಜೋಗುಳ ಮತ್ತು ಮುಕ್ತ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದಾರೆ.
ಅಪರ್ಣಾ ಕೇವಲ ಕಿರುತೆರೆಯಲ್ಲಿ ಮಾತ್ರವಲ್ಲದೆ ಬೆಳ್ಳಿತೆರೆಯಲ್ಲೂ ತಮ್ಮನ್ನು ಗುರುತಿಸಿಕೊಂಡಿರುವ ಪ್ರತಿಭೆ. ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ಮಸಣದ ಹೂವು' ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಅಪರ್ಣಾ ಮುಂದೆ ಇನ್ಸ್ಪೆಕ್ಟರ್ ವಿಕ್ರಂ’, ‘ನಮ್ಮೂರ ರಾಜ’, ‘ಒಂದಾಗಿ ಬಾಳು’ ಚಿತ್ರದಲ್ಲಿ ಅಭಿನಯಿಸಿದ್ದರು. ಇದೀಗ ವಿನಯ್ ರಾಜ್ಕುಮಾರ್ ಅಭಿನಯದ 'ಗ್ರಾಮಾಯಣ'ದಲ್ಲಿ ವಿನಯ್ ಅವರ ತಾಯಿಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅಪರ್ಣಾ ಪತಿಯ ಹೆಸರು ನಾಗರಾಜ್ ವಸ್ತಾರೆ. 2005ರಲ್ಲಿ ನಾಗರಾಜ್ ಅವರೊಂದಿಗೆ ಅಪರ್ಣಾ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ನಾಗರಾಜ್ ವಸ್ತಾರೆ ವಾಸ್ತುಶಿಲ್ಪಿ. 2002 ರಲ್ಲಿ ದೇಶದ ಹತ್ತು ಪ್ರತಿಭಾನ್ವಿತ ಯುವ ವಿನ್ಯಾಸಕಾರರಾಗಿ ಆಯ್ಕೆಗೊಂಡವರಲ್ಲಿ ನಾಗರಾಜ್ ಕೂಡಾ ಒಬ್ಬರು. ಹೀಗೆ ಪತಿ ವಾಸ್ತುಶಿಲ್ಪಿಯಾಗಿ ಎಲ್ಲರ ಗಮನ ಸೆಳೆದರೆ ಪತ್ನಿ ನಿರೂಪಕಿ, ನಟಿ, ಕಂಠದಾನ ಕಲಾವಿದೆಯಾಗಿ ಎಲ್ಲರ ಮನಸ್ಸಿಗೆ ಹತ್ತಿರವಾಗಿದ್ದಾರೆ.