ಕಿರುತೆರೆ ವೀಕ್ಷಕರಿಗೆ ಹಬ್ಬವೋ ಹಬ್ಬ. ಯಾಕೆಂದರೆ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8 ಇನ್ನೇನು ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿದೆ. ಈಗಾಗಲೇ ಹೊಸ ಸೀಸನ್ ನ ಪ್ರೋಮೋ ರಿಲೀಸ್ ಆಗಿದ್ದು, ವೀಕ್ಷಕರು ಮೆಚ್ಚಿಕೊಂಡಿದ್ದರು. ಇದರ ಜೊತೆಗೆ ಈ ಬಾರಿ ದೊಡ್ಮನೆಯೊಳಗೆ ಕಾಲಿಡುವ ಸ್ಪರ್ಧಿಗಳು ಯಾರು ಎಂಬ ಕುತೂಹಲ ಕಿರುತೆರೆ ವೀಕ್ಷಕರಲ್ಲಿ ಮೂಡಿದೆ.
ಅದೇ ಕಾರಣದಿಂದ ಸೋಶಿಯಲ್ ಮೀಡಿಯಾದಲ್ಲಿ ಹಿತಾ ಚಂದ್ರಶೇಖರ್ ಅವರಿಗೆ ಈ ಪ್ರಶ್ನೆ ಕೂಡ ಎದುರಾಯಿತು. ಅದಕ್ಕೆ "ಖಡಾಖಂಡಿತವಾಗಿಯೂ ನಾನು ದೊಡ್ಮನೆಯೊಳಗೆ ಹೋಗುವುದಿಲ್ಲ" ಎಂದು ಹೇಳಿದ್ದಾರೆ. ಅಂದ ಹಾಗೆ ಹಿತಾ ಚಂದ್ರಶೇಖರ್ ಅವರು ಹೀಗೆ ಹೇಳಿದುದರ ಹಿಂದೆ ಮುಖ್ಯವಾದ ಕಾರಣವಿದೆ. ಹೌದು, ಹಿತಾ ದೊಡ್ಮನೆಯಿಂದ ದೂರವಿರಲು ಕುಟುಂಬವೇ ಮುಖ್ಯ ಕಾರಣ.
ಸಿಹಿ ಕಹಿ ಚಂದ್ರು ಮತ್ತು ಸಿಹಿ ಕಹಿ ಗೀತಾ ದಂಪತಿಯ ಮಗಳು ಹಿತಾ ಅವರು ಸದ್ಯ ಪತಿ ಕಿರಣ್ ಶ್ರೀನಿವಾಸ್ ಜೊತೆಗೆ ದೂರದ ಮುಂಬೈನಲ್ಲಿ ವಾಸ ಮಾಡುತ್ತಿದ್ದಾರೆ. ಮೊದಲಿನಿಂದಲೂ ಫ್ಯಾಮಿಲಿ ಜೊತೆಗೆ ಹೆಚ್ಚಾಗಿ ಸಮಯ ಕಳೆದಿರುವ ಹಿತಾ, "ನನಗೆ ಕುಟುಂಬವೇ ಎಲ್ಲಾ. ತುಂಬಾ ದಿನಗಳ ಕಾಲ ಮನೆಯವರನ್ನು ಬಿಟ್ಟು ಇರಲು ನನಗೆ ಸಾಧ್ಯವೇ ಇಲ್ಲ. ಜೊತೆಗೆ ಮನೆಯವರಿಂದ ತುಂಬಾ ದಿನ ದೂರವಿದ್ದರೆ ಅದು ಮನಸ್ಸಿನ ಮೇಲೆ, ಭಾವನೆಗಳ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಅಂತಹ ಸಮಯದಲ್ಲಿ ಯಾವುದೇ ರೀತಿಯ ಟಾಸ್ಕ್ ನಿಭಾಯಿಸುವುದು ಅಸಾಧ್ಯ. ಅದೇ ಕಾರಣದಿಂದ ನಾನು ರಿಯಾಲಿಟಿ ಶೋನಲ್ಲಿ ಭಾಗವಹಿಸುವುದಿಲ್ಲ" ಎಂದು ಉತ್ತರಿಸಿದ್ದಾರೆ.