ಕನ್ನಡ ಚಿತ್ರರಂಗದ ಬಹು ಬೇಡಿಕೆಯ ಖಳ ನಟರ ಪಟ್ಟಿಯಲ್ಲಿ ವಸಿಷ್ಠ ಸಿಂಹ ಕೂಡ ನಿಲ್ಲುತ್ತಾರೆ. ಇವರ ಆ ವಾಯ್ಸ್ ಅಂಡ್ ಖಡಕ್ ಲುಕ್ಗೆ ಎಂಥವರೂ ಫಿದಾ ಆಗುತ್ತಾರೆ.
ವಸಿಷ್ಠ ಎನ್. ಸಿಂಹ ಇಂದು ಜನುಮ ದಿನ ಆಚರಿಸಿಕೊಳ್ಳುತ್ತಿದ್ದಾರೆ. ಇಂದಿಗೆ ಈ ಖಳ ನಾಯಕ 31ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹಾಸನದ ರಾಮನಾಥಪುರ ತಾಲೂಕಿನ ಈ ಖಡಕ್ ಬಾಯ್, ಮೈಸೂರಿನಲ್ಲಿ ಶಾಲಾ ದಿನಗಳನ್ನು ಮುಗಿಸಿ ನಂತರ ಎಂಜಿನಿಯರಿಂಗ್ ಮುಗಿಸಿದರು. 2013ರಲ್ಲಿ ಆರ್ಯ ಲವ್ ಸಿನಿಮಾದಿಂದ ಚಿತ್ರರಂಗಕ್ಕೆ ಹೆಜ್ಜೆ ಇಟ್ಟ ಇವರಿಗೆ 2014ರಲ್ಲಿ ತೆರೆ ಕಂಡ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ರಾಜ ಹುಲಿ' ಭದ್ರ ಬುನಾದಿ ಹಾಕಿಕೊಟ್ಟಿತು.
ಐದು ವರ್ಷಗಳಲ್ಲಿ 20ಕ್ಕೂ ಹೆಚ್ಚು ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ. ಹಾಗೆ ತೆಲುಗು ಹಾಗೂ ತಮಿಳು ಭಾಷೆಗೂ ಜಿಗಿದಿದ್ದಾರೆ. ವಸಿಷ್ಠ ಎನ್. ಸಿಂಹ ಅವರ ಜನಪ್ರಿಯತೆ ಹೇಗಿದೆ ಅಂದರೆ ಜನುಮ ದಿನ ಪ್ರಯುಕ್ತ ನಾಲ್ಕು ಪುಟಗಳ ಜಾಹೀರಾತು ಅವರ ಸಿನಿಮಾ ನಿರ್ಮಾಪಕರಿಂದಲೇ ಹೊರಬಂದಿದೆ.
ವೇಗವಾಗಿ ಬೆಳೆಯುತ್ತಿರುವ ವಸಿಷ್ಠಾಗೆ ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಟಗರು ಸಿನಿಮಗಳಿಂದ ಜನಪ್ರಿಯತೆ ಹೆಚ್ಚಿತು. ಸದ್ಯ ನಾಗತಿಹಳ್ಳಿ ಚಂದ್ರಶೇಖರ್ ಸಿನಿಮಾ ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ನಲ್ಲಿ ನಾಯಕ ಪಟ್ಟಕ್ಕೆ ಏರಿದ್ದಾರೆ.