ಕರ್ನಾಟಕದ ಪ್ರಥಮ ರಾಷ್ಟ್ರಕವಿ ಗೋವಿಂದ ಪೈ ಅವರ ಜೀವನಾಧಾರಿತ ಸಿನಿಮಾ ಸೆಟ್ಟೇರುತ್ತಿದ್ದು, ಮಹಾಕವಿ ಎಂಬ ಶೀರ್ಷಿಕೆಯಲ್ಲಿ ತೆರೆ ಕಾಣಲಿದೆ. ಗೋವಿಂದ ಪೈ ಅವರ ತವರು ಗಡಿನಾಡು ಮಂಜೇಶ್ವರದವರೇ ಆದ ನಟ, ನಿರ್ಮಾಪಕ ರಘುಭಟ್ ತನ್ನ ಲಕ್ಷ್ಮಿಗಣೇಶ್ ಪ್ರೊಡಕ್ಷನ್‌ನಲ್ಲಿ ಮಹಾಕವಿ ಸಿನಿಮಾ ನಿರ್ಮಿಸುತ್ತಿದ್ದಾರೆ. ಅವರ ಪತ್ನಿ ಸುಗುಣ ರಘುಭಟ್ ಈ ಸಿನಿಮಾ ಮೂಲಕ ನಿರ್ಮಾಪಕಿಯಾಗಿ ಸಿನಿರಂಗದ ಸೇವೆಗೆ ಎಂಟ್ರಿ ಕೊಡುತ್ತಿರುವುದು ಮತ್ತೊಂದು ವಿಶೇಷ.

ಸಿನಿಮಾ ಪತ್ರಕರ್ತರಾಗಿ, ಸಾಹಿತಿಯಾಗಿ ಚಿರಪರಿಚಿತರಾಗಿರುವ ಗಣೇಶ್ ಕಾಸರಗೋಡು ಮಹಾಕವಿಯ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಮಂಜೇಶ್ವರದವರೇ ಆದ ಜಯರಾಂ ಸಿನಿಮಾಕ್ಕೆ ಸಂಗೀತ ನೀಡುತ್ತಿದ್ದಾರೆ. ನಿರ್ದೇಶಕರು ಸದ್ಯದಲ್ಲೇ ತಂಡ ಕೂಡಿಕೊಳ್ಳಲಿದ್ದಾರೆ. ಸ್ಟಾರ್ ನಟರೊಬ್ಬರು ಗೋವಿಂದ ಪೈ ಅವರ ಪಾತ್ರದಲ್ಲಿ ಕಾಣಿಸಲಿದ್ದಾರೆ.
ಅಂದಹಾಗೆ ಗೋವಿಂದ ಪೈ ಅವರ ಜನ್ಮದಿನದ ಪ್ರಯುಕ್ತ ಅವರ ತವರು ಮಂಜೇಶ್ವರದಲ್ಲಿ ಮಂಗಳವಾರ ಮಹಾಕವಿ ಸಿನಿಮಾ ಸ್ಕ್ರಿಪ್ಟ್ ಪೂಜೆ ನೆರವೇರಿತು. ಶನೇಶ್ವರ ದೇವಾಲಯದಲ್ಲಿ ಪೂಜೆ ಬಳಿಕ ಗೋವಿಂದ ಪೈ ಅವರ ನಿವಾಸದಲ್ಲಿ ಸಮಾರಂಭ ಜರುಗಿತು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮಂಗಳೂರು ಪೊಲೀಸ್ ಕಮಿಷನರ್ ಮಾತನಾಡಿ, ರೌಡಿಸಂ ಸಿನಿಮಾಗಳಿಗಿಂತ ಇಂತಹ ಒಳ್ಳೆಯ ಸಂದೇಶ ನೀಡುವ ಸಿನಿಮಾಗಳು ಬರಬೇಕು. ಸಮಾಜಕ್ಕೆ ಕೊಡುಗೆ ನೀಡಿದವರ ಜೀವನಗಾಥೆ ಎಲ್ಲರಿಗೂ ಆದರ್ಶ. ಗೋವಿಂದ ಪೈ ಅವರ ಬಯೋಪಿಕ್ ನಿರ್ಮಿಸುತ್ತಿರುವ ರಘುಭಟ್ ಹಾಗೂ ಇಡೀ ತಂಡಕ್ಕೆ ಶುಭವಾಗಲಿ ಎಂದರು.

ಎಡೆನೀರು ಮಠದ ಶ್ರೀ ಸಚ್ಚಿದಾನಂದ ಸ್ವಾಮೀಜಿ ಮಾತನಾಡಿ, ಗೋವಿಂದ ಪೈ ಅವರ ಮೇಲೆ ನನಗೆ ವಿಶೇಷ ಅಭಿಮಾನ. ಕಾರ್ಯಕ್ರಮಕ್ಕೆ ಭೇಟಿ ಮಾಡಿ ಆಹ್ವಾನಿಸುತ್ತೇವೆ ಎಂದು ರಘುಭಟ್ ಹೇಳಿದಾಗ, ಅದಕ್ಕಾಗಿ ಬರುವುದು ಬೇಡ. ಇಂತಹ ಕಾರ್ಯಕ್ರಮಕ್ಕೆ ಬಂದೇ ಬರುತ್ತೇನೆಂದು ಬಹಳ ಖುಷಿಯಿಂದ ಆಗಮಿಸಿದ್ದೇನೆ ಎಂದರು. ಹಾಗೂ ಚಿತ್ರತಂಡವನ್ನು ಆಶೀರ್ವದಿಸಿದರು.

ಮಂಜೇಶ್ವರದ ವಿನ್ಸೆಂಟ್ ಚರ್ಚ್ನ ವಿನೋದ್ ಸಾಲ್ಡಾನ್ ಮಾತನಾಡಿ, ಗೋವಿಂದ ಪೈ ಅವರು 22 ಭಾಷೆಗಳನ್ನು ಬಲ್ಲವರಾಗಿದ್ದರು. ಸರ್ವಧರ್ಮ ಸಹಿಷ್ಣುವಾಗಿದ್ದರು. ಅಂತಹ ಮಹಾನ್ ವ್ಯಕ್ತಿ ನಮ್ಮವರು ಎಂಬುದೇ ಹೆಮ್ಮೆ ಎಂದು ಹೇಳಿದರು. ಮಹಾಕವಿ ಕಥೆ, ಚಿತ್ರಕಥೆ ಮತ್ತು ಸಂಭಾಷಣಾಗಾರ ಗಣೇಶ್ ಕಾಸರಗೋಡು ಮಾತನಾಡಿ, ಸಿನಿಮಾಕ್ಕೆ ಬರೆಯುವ ಅವಕಾಶ ಕೊಟ್ಟ ರಘುಭಟ್ ಅವರಿಗೆ ಧನ್ಯವಾದಗಳು. ಇಡೀ ತಂಡವಾಗಿ ಒಂದೊಳ್ಳೆ ಸಿನಿಮಾ ನಿರ್ಮಾಣವಾಗುತ್ತಿದ್ದು, ಸಿನಿಮಾ ಅದ್ಭುತವಾಗಿ ಮೂಡಿಬರಬೇಕೆಂಬುದು ನನ್ನಾಸೆ. ಆ ನಿಟ್ಟಿನಲ್ಲಿ ನಾನೂ ಶ್ರಮಿಸುತ್ತೇನೆ ಎಂದು ತಿಳಿಸಿದರು.
ನಟ ವಿಕ್ರಂ ಸೂರಿ ಮಾತನಾಡಿ, ಕಮರ್ಷಿಯಲ್ ಸಿನಿಮಾ ಜಗತ್ತಿನಲ್ಲಿ ರಘುಭಟ್ ಇಂತಹ ವಿಭಿನ್ನ ಪ್ರಯತ್ನ, ಸಾಹಸದ ಮೂಲಕ ಹೊಸದೇನಾದರು ಮಾಡಬೇಕು ಎಂಬ ಉತ್ಸಾಹದಲ್ಲಿದ್ದಾರೆ. ದುಡ್ಡು ಮಾಡುವ ಇರಾದೆ ಇದ್ದಿದ್ದರೆ ಕಮರ್ಷಿಯಲ್ ಸಿನಿಮಾಗಳಿಗೆ ಬಂಡವಾಳ ಸುರಿಯಬಹುದಿತ್ತು. ಆದರೆ, ತನ್ನೂರಿನ ಕವಿಯ ಬಯೋಪಿಕ್ ಮಾಡಲು ಹೊರಟಿದ್ದಾರೆ. ನಾನು ಸ್ನೇಹಿತನಾಗಿ, ಸಿನಿಮಾರಂಗದವನಾಗಿ ಸದಾ ಜೊತೆಗಿರುತ್ತೇನೆ. ಒಂದೇ ಒಂದು ರೂ.ಸಂಭಾವನೆ ಪಡೆಯದೆ ತಂಡದೊಂದಿಗೆ ಮಹಾಕವಿ ಸಿನಿಮಾಕ್ಕಾಗಿ ಶ್ರಮಿಸುತ್ತೇನೆ ಎಂದು ಹೇಳಿದರು.
ನಟಿ ನಮಿತಾ ರಾವ್ ಮಾತನಾಡಿ, ರಘುಭಟ್ ಅವರಿಂದ ನಾವೂ ಮಂಜೇಶ್ವರದ ಮಕ್ಕಳೇ ಆಗಿದ್ದೇವೆ. ನಮ್ಮೂರಿನ ಕೀರ್ತಿಕಳಶ ಗೋವಿಂದ ಪೈ ಅವರ ಬಯೋಪಿಕ್ ತರುತ್ತಿರುವ ರಘುಭಟ್ ಅವರಿಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.