ಸ್ಯಾಂಡಲ್ವುಡ್ನ ವಿಕಟ ಕವಿ ಯೋಗರಾಜ್ ಭಟ್ರ ನಿರ್ದೇಶನದ ಗರಡಿಯಲ್ಲಿ ಪಳಗಿದ ಲೂಸಿಯಾ ಪವನ್ ಕುಮಾರ್ ಅಯೋಗ್ಯ ಮಹೇಶ್ ಕುಮಾರ್ ಈಗಾಗಲೇ ಸ್ವತಂತ್ರ ನಿರ್ದೇಶಕರಾಗಿ ಸಕ್ಸಸ್ ಕಂಡಿದ್ದಾರೆ. ಅಲ್ಲದೆ ಈಗ ಭಟ್ಟರ ಗರಡಿಯಲ್ಲೇ ಪಳಗಿರುವ ಮತ್ತೊಬ್ಬ ಶಿಷ್ಯ ವಿರೇಶ್ ಪಿ.ಎಮ್ ಸ್ವತಂತ್ರ ನಿರ್ದೇಶಕರಾಗಲು ಹೊರಟಿದ್ದು , ವಿರೇಶ್ ಪಿ.ಎಮ್ ನಿರ್ದೇಶನದ ಮೊದಲ ಚಿತ್ರ " ಗಿರ್ಕಿ" ಚಿತ್ರ ಸೆಟ್ಟೇರಿದೆ.
ಬೆಂಗಳೂರಿನ ವಸಂತನಗರದ ವಸಂತ ವಲ್ಲಭ ದೇವಸ್ಥಾನದಲ್ಲಿ ಭಾನುವಾರ ನಡೆದ ಗಿರ್ಕಿ ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ನಿರ್ದೇಶಕರಾದ ಯೋಗರಾಜ್ ಭಟ್ ಆಗಮಿಸಿ ಕ್ಲಾಪ್ ಮಾಡುವ ಮೂಲಕ ತನ್ನ ಶಿಷ್ಯನ ಮೊದಲ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ಅಲ್ಲದೆ ಈ ಚಿತ್ರದ ಮತ್ತೊಂದು ವಿಶೇಷ ಅಂದ್ರೆ ಮಜಾ ಟಾಕೀಸ್ ಖ್ಯಾತಿಯ ತರಂಗ ವಿಶ್ವ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸುವುದರ ಜೊತೆಗೆ ಮೊದಲ ಬಾರಿಗೆ ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ವಾಸಕಿ ಮೂವಿ ಪ್ರೊಡಕ್ಷನ್ ಬ್ಯಾನರ್ ನಡಿ ತರಂಗ ವಿಶ್ವ ಅವರ ಜೊತೆ ಸೇರಿ ಈ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದು, ದಕ್ಷ ಪೊಲೀಸ್ ಕಾನ್ಸ್ಟೇಬಲ್ ಪಾತ್ರದಲ್ಲಿ ತರಂಗ ವಿಶ್ವ ಕಾಣಿಸಲಿದ್ದಾರಂತೆ.
ಅಲ್ಲದೆ ಚಿತ್ರದಲ್ಲಿ ಲೀಡ್ ರೋಲ್‌ನಲ್ಲಿ ಡಾಟರ್ ಆಫ್ ಪಾರ್ವತಮ್ಮ ಚಿತ್ರದಲ್ಲಿ ನೆಗೆಟಿವ್ ರೋಲ್‌ನಲ್ಲಿ ಕಾಣಿಸಿದ್ದ ವಿಲೋಕ್ ರಾಜ್ ಗಿರ್ಕಿ ಚಿತ್ರದಲ್ಲಿ ನಾಯಕನಾಗಿ ಬಣ್ಣ ಹಚ್ಚುತ್ತಿದ್ದಾರೆ. ಇನ್ನು ಗಿರ್ಕಿ ಚಿತ್ರವೂ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದೆ. ಕೆಲವು ಪ್ರಮುಖ ಪಾತ್ರಗಳ ಸುತ್ತಲೇ ಸುತ್ತುವ ಕಥೆಯಾದ್ದರಿಂದ ಚಿತ್ರಕ್ಕೆ ಗಿರ್ಕಿ ಎಂದು ಟೈಟಲ್ ನೀಡಲಾಗಿದೆ ಎಂಬುದು ಚಿತ್ರತಂಡದ ಮಾತು. ಅಲ್ಲದೆ ಮೂರು ಹಾಡುಗಳಿದ್ದು ವೀರಸಮರ್ಥ್ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ. ಯೋಗರಾಜಭಟ್ಟರು 2 ಹಾಡು ಬರೆಯುತ್ತಿದ್ದರೆ ಜಯಂತ್ ಕಾಯ್ಕಿಣಿಯವರು ಒಂದು ಹಾಡು ಬರೆಯಲಿದ್ದಾರೆ.
ಅಲ್ಲದೆ ಈ ಚಿತ್ರದಲ್ಲಿ ಬಾರಿನ ಸುತ್ತ ಸುತ್ತುವ ಒಂದು ಮಾಸ್ ಸಾಂಗ್ ಆ ಸಾಂಗಿಗೆ ಭಟ್ಟರೆ ಸಾಹಿತ್ಯ ಬರೆದಿದ್ದು, ಮತ್ತೊಮ್ಮೆ ಪಡ್ಡೆ ಹೈಕಳನ್ನು ಬಾರ್ ಸುತ್ತ ಗಿರಿಕಿ ಹೊಡಿಸೋಕೆ ವಿಕಟಕವಿ ರೆಡಿಯಾಗುತ್ತಿದ್ದಾರೆ. ಗಿರ್ಕಿ ಚಿತ್ರದಲ್ಲಿ ಇಬ್ಬರು ನಾಯಕಿಯರಿರಲಿದ್ದಾರೆ. ನಾಯಕಿಯರ ಹುಡುಕಾಟದಲ್ಲಿ ಚಿತ್ರತಂಡ ತೊಡಗಿದೆ. ನಾಯಕರನ್ನು ಫೈನಲ್ ಮಾಡಿಕೊಂಡು ಶೂಟಿಂಗ್ ಅಣಿಯಾಗಿರುವ ಚಿತ್ರತಂಡ ಬೆಂಗಳೂರು, ಮೈಸೂರು ಸುತ್ತಮುತ್ತ ಚಿತ್ರದ ಶೂಟಿಂಗ್ ಕಂಪ್ಲೀಟ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.