ಕನ್ನಡ ಚಿತ್ರ ರಂಗದ ಆಧುನಿಕ ‘ರಂಗನಾಯಕಿ’ ಅದಿತಿ ಪ್ರಭುದೇವ ಈಗ 'ಗಜಾನನ ಆ್ಯಂಡ್ ಗ್ಯಾಂಗ್' ಸೇರಿಕೊಂಡಿದ್ದಾರೆ. ಈ ಹಿಂದೆ ವಿನಾಯಕ ಗೆಳೆಯರ ಬಳಗ ಅಂತ ಸಿನಿಮಾ ಸಹ ಬಂದಿತ್ತು. ಈಗ ಕೊಂಚ ಹೆಸರು ಬದಲಾವಣೆ. ಗಣೇಶ ಚತುರ್ಥಿ ಅಂಗವಾಗಿ ಈ ಚಿತ್ರದ ಪೋಸ್ಟರ್ ಇಂದು ಬಿಡುಗಡೆ ಆಗಿದೆ.
ಧೈರ್ಯಂ, ಬಜಾರ್, ಆಪರೇಷನ್ ನಕ್ಷತ್ರ, ಸಿಂಗಾ, ರಂಗನಾಯಕಿ, ಬ್ರಹ್ಮಚಾರಿ, ತೋತಾಪುರಿ, ಒಂಬತ್ತನೇ ದಿಕ್ಕು, ಓಲ್ಡ್ ಮಾಂಕ್ ಸಿನಿಮಾಗಳ ಖ್ಯಾತಿಯ ಜನಪ್ರಿಯ ನಟಿ ಅದಿತಿ ಪ್ರಭುದೇವ ಹೇಳುವುದು ಹೀಗೆ- "ಈ ಚಿತ್ರ ಒಂದು ಕಲರ್ಫುಲ್ ಕಾಲೇಜ್ ಕಥೆ ಒಳಗೊಂಡಿದೆ. ಇದು ಮಧ್ಯಮ ವರ್ಗದ ಕಾಲೇಜು ಪ್ರೀತಿ. 2014 ರಿಂದ ಸಿನಿಮಾ 2021 ರ ವರೆಗೆ ಟ್ರಾವೆಲ್ ಆಗುವುದಿದೆ. 2021 ರಿಂದ ಶುರು ಆಗಿ ಫ್ಲ್ಯಾಶ್ ಬ್ಯಾಕ್ ಹೋಗುವ ನಿರೂಪಣೆ ಇದೆ." ಎಂದರು.
ಅದಿತಿ ಪ್ರಭುದೇವ ಅವರಿಗೆ ನಾಯಕ ಆಗಿ ‘ಇರುವುದೆಲ್ಲವ ಬಿಟ್ಟು’ ಚಿತ್ರದ ನಾಯಕ ಶ್ರೀ ಮಹಾದೇವ್ ಜೋಡಿ ಆಗಲಿದ್ದಾರೆ. ‘ನಂ ಗಣಿ ಬಿಕಾಂ ಪಾಸು’ ಚಿತ್ರಕ್ಕೆ ಕಥೆ ಹಾಗೂ ನಿರ್ದೇಶನ ಮಾಡುವುದರ ಜೊತೆಗೆ ಮುಖ್ಯ ಪಾತ್ರ ಸಹ ಮಾಡಿದ್ದ ಅಭಿಷೇಕ್ ಶೆಟ್ಟಿ ಈ ಚಿತ್ರ ನಿರ್ದೇಶನ ಮಾಡುತ್ತಿದ್ದು, ಒಂದು ಪ್ರಮುಖ ಘಟ್ಟದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಗೆಳೆಯನ ಪಾತ್ರದಲ್ಲಿ ನಾಟ್ಯ ರಂಗ ಇದ್ದಾರೆ.
ಮೈಸೂರು, ಮಡಿಕೇರಿ, ಚಿಕ್ಕಮಗಳೂರು ಸ್ಥಳಗಳಲ್ಲಿ ಚಿತ್ರೀಕರಣ ಹಮ್ಮಿಕೊಳ್ಳಲಾಗಿದೆ. ಮೂರು ಹಾಡುಗಳಿಗೆ ಪ್ರದ್ಯುತನ್ ಸಂಗೀತ, ಉದಯ ಲೀಲ ಛಾಯಾಗ್ರಹಣ, ವಿಜೆಟ್ ಚಂದ್ರ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ಸಂಯೋಜನೆ ಮಾಡಲಿದ್ದಾರೆ.
ಬೃಂದಾವನ್ ಎಂಟರ್ ಪ್ರೈಸಸ್ ಅಡಿಯಲ್ಲಿ ಯುಎಸ್ ನಾಗೇಶ್ ಕುಮಾರ್ ನಿರ್ಮಾಪಕರಾಗಿ ಹಣ ಹೂಡುತ್ತಿದ್ದಾರೆ. ಈ ಹಿಂದೆ ‘ಸೆಕಂಡ್ ಹಾಫ್ ಹಾಗೂ 'ನಂ ಗಣಿ ಬಿಕಾಂ ಪಾಸು’ ಸಿನಿಮಾಗಳನ್ನು ನಾಗೇಶ್ ಕುಮಾರ್ ನಿರ್ಮಾಣ ಮಾಡಿದ್ದರು.