ಮುರಳಿಕೃಷ್ಣನ ಈ ನೋವಿಗೆ ಕಾರಣ ಅವರ ಸಹೋದರ ನಿರ್ದೇಶಕ ಶಾಂತಾರಾಮ್. ಇವರು ಕಾಲವಾಗಿ ತುಂಬ ದಿನವಾಯಿತು. ಮರಳಿ ಗೂಡಿಗೆ, ಬಾಳ ನೌಕೆ, ಹೃದಯ ಸಾಮ್ರಾಜ್ಯ, ಕರ್ಣನ ಸಂಪತ್ತು ಚಿತ್ರಗಳಿಗೆ ನಿರ್ದೇಶಕನಾಗಿ ದುಡಿದಿದ್ದ ಶಾಂತಾರಾಮ್ ನಟನಾಗಿಯೂ ಬಣ್ಣ ಹಚ್ಚಿದ್ದರು. ಕನ್ನಡದಲ್ಲಿ ಕೆಲವು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಅವರು, ‘ಕರ್ಣನ ಸಂಪತ್ತು’ ಅರ್ಧದಲ್ಲೇ ಬಿಟ್ಟು ಹೊರಟುಬಿಟ್ಟರು. ಈ ಚಿತ್ರಕ್ಕೆ ಸ್ವಂತ 20 ಲಕ್ಷ ಹಣ ಖರ್ಚು ಮಾಡಿ ಬಿಡುಗಡೆ ಮಾಡುವಂತೆ ಮಾಡಿದ್ದೆ ಈ ಮುರಳಿ ಕೃಷ್ಣ. ಈ ವಿಚಾರವನ್ನು ಮೆಲುಕು ಹಾಕುವ ಮುರಳಿ, ಅಂದು ಹಾಕಿದ ಹಣ ನಂಗೆ ಬರಲಿಲ್ಲ ಎನ್ನುತ್ತಾರೆ.
ಮುರಳಿ ಕೃಷ್ಣ ಅವರು ಒಂದು ರೀತಿಯಲ್ಲಿ ಪಂಟರ್. ಮಾತಿನ ಮಲ್ಲ, ಅಳೆದು ತೂಗಿ ಮಾತನಾಡುವ ವ್ಯಕ್ತಿ. ವೃತ್ತಿಯಲ್ಲಿ ಹಿರಿಯ ವಕೀಲರು. ಕನ್ನಡ ಸಾಹಿತ್ಯ ಲೋಕ ಅಲ್ಲದೆ ಇಂಗ್ಲಿಷ್ ಕಾದಂಬರಿಕಾರ ಆರ್. ಕೆ. ನಾರಾಯಣ್ ಅವರ ‘ಅಸ್ತ್ರ ಲಜರ್ ಡೇ’ ಓದಿ ಅಲ್ಲಿಂದ ಹುಟ್ಟಿದ್ದ ಕೆಲವು ಪ್ರಶ್ನೆಗಳಿಗೆ ಮುರಳಿಕೃಷ್ಣ ‘ಗರ’ ಸಿನಿಮಾದಲ್ಲಿ ಉತ್ತರ ಹುಡುಕಿದ್ದಾರೆ. ಚಿತ್ರ ಮೇನಲ್ಲಿ ಬಿಡುಗಡೆ ಆಗುತ್ತಿದೆ. ವಕೀಲನಾಗಿ ನಾನು ಅನೇಕ ಕೇಸ್ ಗೆದ್ದಿರಬಹುದು. ಆದರೆ, ಪ್ರೇಕ್ಷಕರ ಮುಂದೆ ‘ಗರ’ ಗೆಲ್ಲಬೇಕು ಎಂಬುದು ಇವರ ಇಚ್ಛೆ.
ಮೊದಲ ಪ್ರಯತ್ನದಲ್ಲಿ ಮುರಳಿಕೃಷ್ಣ, ‘ಗರ’ ಮೂಲಕ ಹಿಂದಿ ಹಾಸ್ಯ ನಟ ಜಾನಿ ಲಿವರ್, ನೃತ್ಯ ನಿರ್ದೇಶಕಿ ಸರೋಜ್ ಖಾನ್ ಅವರನ್ನು ಪರಿಚಯ ಮಾಡುತ್ತಿದ್ದಾರೆ. ಅಚ್ಚು ಕಟ್ಟು ಮತ್ತು ಶಿಸ್ತಿನಿಂದ ‘ಗರ’ ತಯಾರು ಮಾಡಿದ್ದಾರೆ.
ಈ ಚಿತ್ರದಲ್ಲಿ ಬಿಗ್ಬಾಸ್ ಖ್ಯಾತಿಯ ರೆಹಮಾನ್ ಹಾಗೂ ಪ್ರದೀಪ್ ಆರ್ಯನ್ ಜೊತೆ ಆವಂತಿಕಾ ಮೋಹನ್, ನೇಹಾ ಪಾಟೀಲ್, ರಮೇಶ್ ಭಟ್, ಮನದೀಪ್ ರಾಯ್, ಎಂ.ಎಸ್ ಉಮೇಶ್ ಇನ್ನಿತರರು ಅಭಿನಯಿಸಿದ್ದಾರೆ. ಬಿ.ಕಾಂ ಓದುತ್ತಿರುವ ತೇಜಸ್ ‘ಗರ’ ಚಿತ್ರಕ್ಕೆ ಹೊಸ ಬಗೆಯ ಪೋಸ್ಟರ್ ಡಿಸೈನ್ ಮಾಡಿದ್ದಾರೆ. ಎಚ್.ಸಿ ವೇಣು ಛಾಯಾಗ್ರಹಣ, ಸಾಗರ್ ಗುರುರಾಜ್ ಈ ಚಿತ್ರದ ಸಂಗೀತ ನಿರ್ದೇಶಕರು.