ಈ ಶುಕ್ರವಾರ ಒಂದು ಕನ್ನಡ ಚಿತ್ರದ ಎದುರು ನಾಲ್ಕು ಪರಭಾಷೆ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಗುರುರಾಜ್ ಜಗ್ಗೇಶ್ ಅಭಿನಯದ 'ವಿಷ್ಣು ಸರ್ಕಲ್' ಸಿನಿಮಾ ಈ ವಾರ ಬಿಡುಗಡೆಯಾಗುತ್ತಿದೆ. ಲಕ್ಷ್ಮಿ ದಿನೇಶ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ.
ದಿನೇಶ್ ಬಾಬು ನಿರ್ದೇಶನದ 'ಹಗಲು ಕನಸು' ಕೂಡಾ ಈ ವಾರ ಬಿಡುಗಡೆಯಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಸಿನಿಮಾ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. ಇನ್ನು ಮುಂದಿನ ಗುರುವಾರ ಅಂದರೆ ಸೆಪ್ಟೆಂಬರ್ 12 ರಂದು ಗುರುವಾರವೇ ತೆರೆ ಕಾಣುತ್ತಿದೆ. 'ವಿಷ್ಣು ಸರ್ಕಲ್' ಸಿನಿಮಾದೊಂದಿಗೆ ಈಗಾಗಲೇ ಬಿಡುಗಡೆಯಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಪ್ರಿಯವಾಗಿರುವ ‘ಗಿರ್ ಗಿಟ್ಲೆ’ ಸಿನಿಮಾ ಮತ್ತೆ ಕೆಲವೊಂದು ಮಾಲ್ಗಳಲ್ಲಿ ಬಿಡುಡೆಯಾಗುತ್ತಿದೆ. 'ವಿಷ್ಣು ಸರ್ಕಲ್' ಸಿನಿಮಾಗೆ ಸೆಡ್ಡು ಹೊಡೆಯಲು ತೆಲುಗಿನ ಎರಡು ಹಾಗೂ ತಮಿಳಿನ ಎರಡು ಸಿನಿಮಾಗಳು ಬಿಡುಗಡೆಯಾಗುತ್ತಿವೆ.
ತಿರುಪತಿ ಪಿಕ್ಚರ್ಸ್ ಪ್ಯಾಲೇಸ್ ಅಡಿಯಲ್ಲಿ ಆರ್.ಬಿ. ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಇವರು ಡಾ. ವಿಷ್ಣುವರ್ಧನ್ ಅವರ ಕಟ್ಟಾ ಅಭಿಮಾನಿ. ಅವರ ಅಭಿಮಾನದ ಕುರುಹನ್ನು ಚಿತ್ರದಲ್ಲಿ ನೋಡಬಹುದು. 'ಹಾಫ್ ಮೆಂಟಲ್' ನಂತರ ಲಕ್ಷ್ಮಿ ದಿನೇಶ್ ಕಥೆ, ಚಿತ್ರಕಥೆ, ಗೀತ ರಚನೆ, ಸಂಭಾಷಣೆ ಬರೆದು ನಿರ್ದೇಶನ ಕೂಡಾ ಮಾಡಿದ್ದಾರೆ. ಇನ್ನು ಗುರುರಾಜ್ಗೆ ಸಂಹಿತ ವಿನ್ಯಾ, ದಿವ್ಯಾ ಗೌಡ, ಜಾಹ್ನವಿ ಮೂವರು ನಾಯಕಿಯರು ಜೊತೆಯಾಗಿ ನಟಿಸಿದ್ದಾರೆ. ಚಿತ್ರದ ಹಾಡುಗಳಿಗೆ ರವಿ ಶ್ರೀವತ್ಸ ಸಂಗೀತ ನೀಡಿದ್ದು ಪ್ರದೀಪ್ ವರ್ಮಾ ಹಿನ್ನೆಲೆ ಸಂಗೀತ ನೀಡಿದ್ದಾರೆ. ಪೋಷಕ ಪಾತ್ರಗಳಲ್ಲಿ ಬಿರಾದಾರ್, ರಾಕ್ಲೈನ್ ಸುಧಾಕರ್, ಕಡ್ಡಿ ವಿಶ್ವ, ಪಟ್ರೆ ನಾಗರಾಜ್, ಯತಿರಾಜ್, ಸಂದೇಶ್, ವಿ. ಮನೋಹರ್ ಹಾಗೂ ಇತರರು ಅಭಿನಯಿಸಿದ್ದಾರೆ.