ಬೆಂಗಳೂರು: ಸ್ಯಾಂಡಲ್ವುಡ್ ಖ್ಯಾತ ನಿರ್ಮಾಪಕ ಕೆ. ಮಂಜು ವಿರುದ್ಧ ಮಹಾದೇವಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ತಾರಾ ಅಭಿನಯದ 'ಹೆಬ್ಬೆಟ್ ರಾಮಕ್ಕ' ಚಿತ್ರದ ನಿರ್ಮಾಪಕ ಪುಟ್ಟರಾಜು ಎಂಬುವವರು ಕೆ. ಮಂಜು ವಿರುದ್ಧ ದೂರು ದಾಖಲಿಸಿದ್ದಾರೆ. ಹಣ ಪಡೆದು ವಂಚನೆ ಮಾಡಿದ ಆರೋಪದಡಿಯಲ್ಲಿ ಐಪಿಸಿ ಸೆಕ್ಷನ್ 420, 506 ಮತ್ತು 34 ಸೆಕ್ಷನ್ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ಎಫ್ಐಆರ್ನಲ್ಲಿ ಮಂಜು ಅವರನ್ನು ಎರಡನೇ ಆರೋಪಿಯಾಗಿ ದಾಖಲಿಸಲಾಗಿದೆ. ರಾಜ್ಗೋಪಾಲ್ ಬಿ.ಎಂ, ರಮೇಶ್ ಬಾಬು, ವಿಜಯಲಕ್ಷ್ಮಿ ಎಂಬುವವರು ಪ್ರಮುಖ ಆರೋಪಿಗಳಾಗಿದ್ದಾರೆ.
ಇದನ್ನೂ ಓದಿ: ಪೊಗರು ಸಿನಿಮಾ ನಿರ್ಮಾಪಕನ ಮನೆ ಮೇಲೆ ಐಟಿ ದಾಳಿ
2018 ರಲ್ಲಿ ಆರೋಪಿ ರಾಜಗೋಪಾಲ್ ಹೊಸಕೋಟೆ ತಾಲೂಕಿನ ಸೊಣ್ಣೇನಹಳ್ಳಿಯಲ್ಲಿರುವ ತಮ್ಮ ಸರ್ವೆ ನಂ 7/3 ರ 18. 3/4 ಗುಂಟೆ ಜಮೀನನ್ನು ಮಾರಾಟ ಮಾಡಿದ್ದರು. ಆರ್ಟಿಜಿಎಸ್ನಲ್ಲಿ ದೂರುದಾರ ಪುಟ್ಟರಾಜು ಮೊದಲು ಎ1 ರಾಜಗೋಪಾಲ್ಗೆ ಅಡ್ವಾನ್ಸ್ ನೀಡಿದ್ದರು. ಆದರೆ ಅಷ್ಟರಲ್ಲಿ ಕೆ. ಮಂಜು ತಾನು ಅದೇ ಜಾಗ ಅಗ್ರಿಮೆಂಟ್ ಮಾಡಿಕೊಂಡಿದ್ದರು. ಬಳಿಕ ಈ ನಾಲ್ಕೂ ಮಂದಿ ಸೇರಿ ರಿಜಿಸ್ಟರ್ ಮಾಡಿಕೊಡುವುದಾಗಿ ಪುಟ್ಟರಾಜು ಬಳಿಯಿಂದ ಹಣ ಪಡೆದು ನಿರ್ಮಾಪಕ ಮಂಜು ಅವರ ಹೆಸರಿಗೆ ಜಮೀನು ಮಾರಾಟ ಮಾಡಿದ್ದಾರೆ. ಆದರೆ 2018ರಲ್ಲಿ ಹಣ ಪಡೆದಿದ್ದರೂ ನನಗೆ ವಾಪಸ್ ನೀಡದೇ ವಂಚನೆ ಮಾಡಿರುವ ಕಾರಣ ಹಣದ ಬಗ್ಗೆ ಮಾತನಾಡಲು ಪುಟ್ಟ ರಾಜು ತೆರಳಿದ್ದಾರೆ. ಈ ವೇಳೆ ನನಗೆ ಜೀವ ಬೆದರಿಕೆ ಒಡ್ಡಲಾಗಿದೆ ಎಂದು 'ಹೆಬ್ಬೆಟ್ ರಾಮಕ್ಕ' ನಿರ್ಮಾಪಕ ಎಸ್.ಎ. ಪುಟ್ಟರಾಜು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿರುವ ಮಹದೇವಪುರ ಪೊಲೀಸರು ಹಣ ಪಡೆದು ವಂಚನೆ ಮಾಡಿದ ಆರೋಪದಡಿಯಲ್ಲಿ ಐಪಿಸಿ ಸೆಕ್ಷನ್ 420, 506 ಮತ್ತು 34 ಅಡಿಯಲ್ಲಿ ಕೆ. ಮಂಜು ವಿರುದ್ಧ ಎಫ್ಐಆರ್ ಮಾಡಿದ್ದಾರೆ.