ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದ ಗುಬ್ಬಿ ಜೈರಾಜ್ 3 ದಿನಗಳ ಹಿಂದಷ್ಟೇ ಅಧಿಕಾರಿ ಸ್ವೀಕರಿಸಿದ್ದಾರೆ. ಇನ್ನು ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಜೈ ರಾಜ್ ಕಾರ್ಯಪ್ರವೃತ್ತರಾಗಿದ್ದಾರೆ.
ನಗರದಲ್ಲಿ ಸಿನಿಮಾ ಫ್ಲೆಕ್ಸ್, ಬ್ಯಾನರ್ಗಳನ್ನು ಬಳಸಲು ಅನುಮತಿ ನೀಡುವಂತೆ ಬಿಬಿಎಂಪಿಗೆ ಚಲನಚಿತ್ರ ವಾಣಿಜ್ಯ ಮಂಡಳಿ ಮನವಿ ಸಲ್ಲಿಸಿದೆ. ಬೆಂಗಳೂರಿನಲ್ಲಿ ಅನಧಿಕೃತ ಜಾಹೀರಾತು, ಹೋರ್ಡಿಂಗ್ಗಳನ್ನು ನಿಷೇಧಿಸಿ ಹೈಕೋರ್ಟ್ ಆದೇಶ ನೀಡಿದ್ದ ಹಿನ್ನೆಲೆ ಜಾಹೀರಾತು ಹೋರ್ಡಿಂಗ್ಗಳನ್ನು ತೆರವುಗೊಳಿಸಿತ್ತು. ಅಲ್ಲದೆ ಪ್ಲಾಸ್ಟಿಕ್ ಬಂಟಿಂಗ್ಗಳನ್ನೂ ನಿಷೇಧಿಸಿತ್ತು. ಇದರಿಂದ ಸ್ಯಾಂಡಲ್ವುಡ್ಗೆ ದೊಡ್ಡ ಹೊಡೆತ ಉಂಟಾಗಿತ್ತು. ಸಿನಿಮಾಗಳ ಪ್ರಮೋಷನ್ಗೆ ಜಾಹೀರಾತುಗಳನ್ನೇ ನಂಬಿಕೊಂಡಿದ್ದ ಚಿತ್ರ ನಿರ್ಮಾಪಕರು ಕಂಗಾಲಾಗಿದ್ದರು.
ಈ ಹಿಂದೆ ಹಲವು ಬಾರಿ ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದ್ ಹಾಗೂ ಚಿನ್ನೇಗೌಡರು ಬಿಬಿಎಂಪಿಗೆ ಈ ಸಂಬಂಧ ಮನವಿ ಸಲ್ಲಿಸಿದ್ದರು. ಆಗ ಬಿಬಿಎಂಪಿಗೆ ಸರ್ಕಾರ ಹೊಸ ಜಾಹೀರಾತು ನೀತಿ ಜಾರಿಗೆ ತರುವಂತೆ ಆದೇಶಿಸಿತ್ತು. ಆದರೆ ಬಿಬಿಎಂಪಿ ಹೊಸ ಜಾಹೀರಾತು ನೀತಿಯನ್ನು ಜಾರಿಗೆ ತರುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವುದರಿಂದ ಚಿತ್ರರಂಗಕ್ಕೆ ನಷ್ಟವಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷ ಗುಬ್ಬಿ ಜೈರಾಜ್, ಅಧಿಕಾರ ಸ್ವಿಕರಿಸಿದ ಒಂದೇ ದಿನದಲ್ಲಿ ಈ ಸಮಸ್ಯೆಯನ್ನು ಪರಿಹರಿಸುವತ್ತ ಗಮನ ಹರಿಸಿದ್ದಾರೆ. ಸಿನಿಮಾ ಫ್ಲೆಕ್ಸ್ ಬಳಕೆ ವಿಚಾರವಾಗಿ ಈಗಾಗಲೇ ಜೈರಾಜ್ ಬಿಬಿಎಂಪಿಗೆ ಮನವಿ ಸಲ್ಲಿಸಿದ್ದಾರಂತೆ.
'ಖನನ' ಚಿತ್ರದ 50 ದಿನಗಳ ಸಂಭ್ರಮದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜೈರಾಜ್ ಈ ವಿಷಯವನ್ನು ಪ್ರಸ್ತಾಪಿಸಿದರು. 'ಈಗಾಗಲೇ ನಾವು ಬಿಬಿಎಂಪಿಗೆ ಮನವಿ ಸಲ್ಲಿಸಿದ್ದೇವೆ. ಸಿನಿಮಾದ ಪೋಸ್ಟರ್ಗಳಿಗೆ ಅನುಮತಿ ನೀಡುವಂತೆ ಬಿಬಿಎಂಪಿಗೆ ಕೇಳಿಕೊಂಡಿದ್ದೇವೆ. ಚಿತ್ರಮಂದಿರಗಳ ಕಾಂಪೌಂಡ್ಗಳ ಮೇಲೂ ಪೋಸ್ಟರ್ಗಳನ್ನು ಅಂಟಿಸಲು ಬಿಬಿಎಂಪಿ ಅಧಿಕಾರಿಗಳು ಅನುಮತಿ ನೀಡುತ್ತಿಲ್ಲ. ಸಿನಿಮಾಗಾಗಿ ಕೆಲವು ಜಾಹಿರಾತು ಫಲಕಗಳನ್ನು ನಿಗದಿಪಡಿಸಿ ಸಿನಿಮಾದ ಪ್ರಮೋಷನ್ಗೆ ಸಹಕಾರ ನೀಡುವಂತೆ ನಾವು ಬಿಬಿಎಂಪಿಗೆ ಮನವಿ ಮಾಡಿದ್ದೇವೆ ಮುಂದಿನ ದಿನಗಳಲ್ಲಿ ಇದನ್ನು ಕಾರ್ಯಗತ ಮಾಡಲು ಶಕ್ತಿಮೀರಿ ಪ್ರಯತ್ನಿಸುವುದಾಗಿ ಜೈರಾಜ್ ತಿಳಿಸಿದರು.