ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಾಗೂ ಭಾರತೀಯ ಚಿತ್ರರಂಗದ ಶ್ರೇಷ್ಠ ನಾಟಕಕಾರ ಗಿರೀಶ್ ಕಾರ್ನಾಡ್ ನಿನ್ನೆ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಕನ್ನಡ ಚಿತ್ರೋದ್ಯಮ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಇಂದು ಕಾರ್ನಾಡ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಫಿಲ್ಮ್ ಚೇಂಬರ್ ಅಧ್ಯಕ್ಷ ಚಿನ್ನೇಗೌಡ, ಉಪಾಧ್ಯಕ್ಷ ಕರಿಸುಬ್ಬು, ನಿರ್ಮಾಪಕ ವಲಯದ ಗೌರವ ಕಾರ್ಯದರ್ಶಿ ಭಾ.ಮಾ.ಹರೀಶ್, ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಕೆ.ವಿ.ಚಂದ್ರಶೇಖರ್, ಸಾ.ರಾ.ಗೋವಿಂದ್, ಥಾಮಸ್ ಡಿಸೋಜ, ನಿರ್ಮಾಪಕ ಕೆ.ಸಿ.ಎನ್.ಚಂದ್ರಶೇಖರ್, ನಿರ್ದೇಶಕ ನಾಗಣ್ಣ, ಉಮೇಶ್ ಬಣಕಾರ್ ಸೇರಿದಂತೆ ಫಿಲ್ಮ್ ಚೇಂಬರ್ ಪದಾಧಿಕಾರಿಗಳು ಕನ್ಮಡದ ರಂಗಕರ್ಮಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಅಧ್ಯಕ್ಷ ಕೆ.ವಿ.ಚಂದ್ರಶೇಖರ್ ಹಾಗೂ ನಿರ್ದೇಶಕ ನಾಗಣ್ಣ, ಗಿರೀಶ್ ಕಾರ್ನಾಡ್ ಸಮಾಜಕ್ಕೆ ಒಳ್ಳೆಯದ್ದನ್ನೇ ಬಯಸಿದ್ದರು. ರಾಜ್ಯ, ರಾಷ್ಟ್ರ ಪ್ರಶಸ್ತಿಗಳನ್ನು ಅವರು ಪಡೆದಿದ್ದರೂ ಸರ್ಕಾರಿ ಗೌರವವನ್ನು ತ್ಯಜಿಸಿದ್ದು ಅವರ ವ್ಯಕ್ತಿತ್ವಕ್ಕೆ ಮಾದರಿ ಎಂದರು. ಫಿಲ್ಮ್ ಚೇಂಬರ್ ಅಧ್ಯಕ್ಷ ಚಿನ್ನೇಗೌಡ ಮಾತನಾಡಿ, ಚಿತ್ರರಂಗಕ್ಕೆ ಗಿರೀಶ್ ಕಾರ್ನಾಡ್ ಅವರ ಕೊಡುಗೆ ಸಾಕಷ್ಟಿದೆ. ಅವರ ನಿರ್ದೇಶನದ ಕಾಡು, ತಬ್ಬಲಿ ನೀನಾದೆ ಮಗನೆ, ಒಂದಾನೊಂದು ಕಾಲದಲ್ಲಿ ಹೀಗೆ ಪ್ರಶಸ್ತಿ ತಂದುಕೊಟ್ಟ ಸಿನಿಮಾಗಳೇ ಇದಕ್ಕೆ ಸಾಕ್ಷಿ. ಗಿರೀಶ್ ಕಾರ್ನಾಡ್ ನಿಧನದಿಂದ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಹಾಗೇ ಅವರ ಕುಟುಂಬಕ್ಕೆ ದೇವರು ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.