'ದಂಗಲ್' ಚಿತ್ರದ ಮೂಲಕ ಸಿನಿಪ್ರೇಮಿಗಳ ಗಮನಸೆಳೆದವರು ನಟಿ ಫಾತಿಮಾ ಸನಾ ಶೇಖ್. ಈ ಫಾತಿಮಾ ಬಾಲಿವುಡ್ ಬಾದ್ಷಾ ಶಾರೂಖ್ ಖಾನ್ ಅವರ ಹುಚ್ಚು ಅಭಿಮಾನಿಯಂತೆ. ಅದೆಷ್ಟರಮಟ್ಟಿಗೆ ಹುಚ್ಚು ಅಭಿಮಾನಿ ಎಂದರೆ, ಶಾರೂಖ್ ಖಾನ್ ಅವರ ಹ್ಯಾಂಡ್‌ಶೇಕ್ ಮಾಡಿದ್ದರಿಂದ ಒಂದಿಡೀ ದಿನ ಆಕೆ ಕೈತೊಳೆದಿರಲಿಲ್ಲವಂತೆ. ಶಾರೂಖ್ ಸ್ಪರ್ಶ ತನ್ನ ಜೊತೆಗೇ ಇರಬೇಕು ಎಂಬ ಕಾರಣಕ್ಕೆ ಅವರು ಹಾಗೆ ಮಾಡಿದ್ದರಂತೆ.
ಈ ವಿಷಯವನ್ನು ಅವರೇ ಕೆಲವು ವರ್ಷಗಳ ಹಿಂದೆ ಹಂಚಿಕೊಂಡಿದ್ದರು. ದೀಪಾವಳಿ ಪಾರ್ಟಿಯೊಂದಕ್ಕೆ ಫಾತಿಮಾ ಹೋಗಿದ್ದಾರೆ. ಈ ಸಂದರ್ಭದಲ್ಲಿ `ದಂಗಲ್' ಚಿತ್ರದಲ್ಲಿ ನಟಿಸಿದ್ದ ಅಮೀರ್ ಖಾನ್ ಮತ್ತು ಸಾನ್ಯ ಮಲ್ಹೋತ್ರ ಸಹ ಇದ್ದರು. ಆ ಪಾರ್ಟಿಗೆ ಶಾರೂಖ್ ಖಾನ್ ಆಗಮನವಾಗಿದೆ. ಮಾತಿನ ಮಧ್ಯೆ, ಶಾರೂಖ್‌ಗೆ ಫಾತಿಮಾ ಅವರನ್ನು ಪರಿಚಯ ಮಾಡಿಕೊಟ್ಟರಂತೆ ಅಮೀರ್. ಈ ಸಂದರ್ಭದಲ್ಲಿ ಫಾತಿಮಾ ಅವರ ಕೈಕುಲುಕಿದ್ದಾರೆ ಶಾರೂಖ್.
ಹಾಗೆ ನೋಡಿದರೆ ಶಾರೂಖ್ ಖಾನ್ ಅವರನ್ನು ಫಾತಿಮಾ ಭೇಟಿ ಮಾಡಿದ್ದು ಅದು ಮೊದಲೇನಲ್ಲ. ಅದಕ್ಕೂ ಕೆಲವು ವರ್ಷಗಳ ಮುಂಚೆ ಶಾರೂಖ್ ಅಭಿನಯದ `ಒನ್ ಟೂ ಕಾ ಫೋರ್' ಎಂಬ ಚಿತ್ರದಲ್ಲಿ ಇವರು ಬಾಲನಟಿಯಾಗಿ ನಟಿಸಿದ್ದರು. ಆದರೆ, ಆಗಿನ್ನೂ ಆಕೆ ಶಾರೂಖ್ ಅವರ ಅಭಿಮಾನಿ ಏನಾಗಿರಲಿಲ್ಲ. ಕ್ರಮೇಣ ಬೆಳೆಯುತ್ತಾ ಶಾರೂಖ್ ಖಾನ್ ಅವರ ಮೇಲೆ ಅಭಿಮಾನ ಬೆಳೆಸಿಕೊಂಡಿದ್ದಾರೆ. ಅವಕಾಶ ಸಿಕ್ಕರೆ ಶಾರೂಖ್ ಜೊತೆಗೆ ಮತ್ತೊಮ್ಮೆ ನಟಿಸಬೇಕು ಎಂಬುದು ಫಾತಿಮಾ ಆಸೆ.