ಬಹುನಿರೀಕ್ಷಿತ ಸುದೀಪ್ ಅಭಿನಯದ 'ಪೈಲ್ವಾನ್' ಇಂದು ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆ ಕಂಡಿದೆ. ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು, ಮಲಯಾಳಂ ಸೇರಿ ಒಟ್ಟು 5 ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಿದೆ. ಬೆಳಗ್ಗೆ 'ಪೈಲ್ವಾನ್' ವಿಶೇಷ ಪ್ರದರ್ಶನ ನೋಡಿದ ಅಭಿಮಾನಿಗಳು ಸಂಭ್ರಮಿಸಿದ್ದಾರೆ.
ಚಿತ್ರದಲ್ಲಿ ಕಿಚ್ಚ ಸುದೀಪ್ ಮೊದಲ ಬಾರಿಗೆ ಪೈಲ್ವಾನ್ ಹಾಗೂ ಕಿಕ್ ಬಾಕ್ಸರ್ ಆಗಿ ಎರಡೂ ಪಾತ್ರಗಳಲ್ಲಿ ಅದ್ಭುತವಾಗಿ ಅಭಿನಯಿಸಿದ್ದಾರೆ. ಈ ಮೂಲಕ ಅಭಿನಯ ಚಕ್ರವರ್ತಿ ಅನ್ನೋದನ್ನು ಅವರು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಜಟ್ಟಿ ಕಾಳಗದಲ್ಲಿ ಜಗಜಟ್ಟಿಯಾಗಿ ಮಿಂಚುವ ಕಿಚ್ಚನ ಅಬ್ಬರಕ್ಕೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಇನ್ನು ಚಿತ್ರದಲ್ಲಿ ನಿರ್ದೇಶಕ ಕೃಷ್ಣ ಅವರ ಶ್ರಮ ಪ್ರತಿ ಫ್ರೇಮ್ನಲ್ಲಿ ಎದ್ದು ಕಾಣುತ್ತದೆ. ಅಲ್ಲದೆ ಇದೇ ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ಅಭಿನಯಿಸಿರುವ ಸುನಿಲ್ ಶೆಟ್ಟಿ ಅವರ ಅಭಿನಯ ಕೂಡಾ ಮನಮುಟ್ಟುವಂತಿದೆ. ಚಿತ್ರದಲ್ಲಿ ಅರ್ಜುನ್ ಜನ್ಯ ಅವರ ಹಿನ್ನೆಲೆ ಸಂಗೀತ ಪ್ಲಸ್ ಪಾಯಿಂಟ್ ಆಗಿದೆ. ಚಿತ್ರ ನೋಡಿದವರು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಮೂಲೆ ಮೂಲೆಗಳಿಂದ ಬಂದಿದ್ದ ಕಿಚ್ಚನ ಅಭಿಮಾನಿಗಳು ಪೈಲ್ವಾನ್ ಕಟೌಟ್ ಮುಂದೆ ಕುಂಬಳಕಾಯಿ ಹಾಗೂ 101 ಈಡುಗಾಯಿ ಒಡೆಯುವ ಮೂಲಕ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಹೆಚ್ಚು ಲಾಭ ಮಾಡಲಿ ಎಂದು ಹಾರೈಸಿದರು. ಅಭಿಮಾನಿಗಳ ಪ್ರತಿಕ್ರಿಯೆಗೆ ಸುದೀಪ್ ಸಂತಸ ವ್ಯಕ್ತಪಡಿಸಿದ್ದಾರೆ. ಸಂತೋಷ್ ಚಿತ್ರಮಂದಿರಕ್ಕೆ ಸುದೀಪ್ ಪತ್ನಿ ಪ್ರಿಯಾ ಸುದೀಪ್ ಹಾಗೂ ಅವರ ಮುದ್ದಿನ ಮಗಳು ಸಾನ್ವಿ ಆಗಮಿಸಿ ಅಭಿಮಾನಿಗಳ ಜೊತೆ ಸಿನಿಮಾ ವೀಕ್ಷಿಸಿದರು.