ಕರ್ನಾಟಕದಲ್ಲಿ ಹುಟ್ಟಿ ತೆಲುಗು ಚಿತ್ರರಂಗದಲ್ಲಿ ನಂಬರ್ ಒನ್ ನಟಿಯಾಗಿ ಮಿಂಚುತ್ತಿರುವ ಮಂಗಳೂರು ಚೆಲುವೆ ಅನುಷ್ಕಾ ಶೆಟ್ಟಿ ಇಂದು 39ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ತಮ್ಮ ಮೆಚ್ಚಿನ ನಟಿಗೆ ಸೋಷಿಯಲ್ ಮೀಡಿಯಾ ಮೂಲಕ ಶುಭ ಕೋರಿದ್ದಾರೆ.
7 ನವೆಂಬರ್ 1981 ರಲ್ಲಿ ದಕ್ಷಿಣ ಕನ್ನಡದ ಪುತ್ತೂರಿನ ತುಳು ಕುಟುಂಬದಲ್ಲಿ ವಿಠಲ್ ಶೆಟ್ಟಿ ಹಾಗೂ ಪ್ರಫುಲ್ಲಾ ಶೆಟ್ಟಿ ದಂಪತಿ ಪುತ್ರಿಯಾಗಿ ಅನುಷ್ಕಾ ಜನಿಸಿದರು. ಅನುಷ್ಕಾಗೆ ಇಬ್ಬರು ಅಣ್ಣಂದಿರಿದ್ದಾರೆ. ಮಂಗಳೂರು ಹಾಗೂ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿದ ಅನುಷ್ಕಾ ಯೋಗ ಶಿಕ್ಷಕಿಯಾಗಿ ಮುಂಬೈನಲ್ಲಿ ಕರಿಯರ್ ಆರಂಭಿಸಿದರು. ಆ ಸಮಯದಲ್ಲಿ ನಿರ್ದೇಶಕ ಪುರಿ ಜಗನ್ನಾಥ್ ತಮ್ 'ಸೂಪರ್' ಚಿತ್ರಕ್ಕೆ ನಾಯಕಿಯನ್ನು ಹುಡುಕುತ್ತಿದ್ದರು. ಚಿತ್ರರಂಗದ ಹಿನ್ನೆಲೆಯೇ ಇಲ್ಲದ ಅನುಷ್ಕಾ, ಸ್ನೇಹಿತರ ಒತ್ತಾಯದಿಂದ ಪುರಿ ಜಗನ್ನಾಥ್ ಅವರನ್ನು ಭೇಟಿ ಮಾಡಿದರು. ಅನುಷ್ಕಾರನ್ನು ನೋಡುತ್ತಿದ್ದಂತೆ ನಮ್ಮ ಚಿತ್ರಕ್ಕೆ ಈಕೆ ಪರ್ಫೆಕ್ಟ್ ಆಗಿ ಹೊಂದುತ್ತಾರೆ ಎಂದು ಆಯ್ಕೆ ಮಾಡಿದರು.
ಸ್ವೀಟಿ ಎಂಬ ಹೆಸರನ್ನು ನಾಗಾರ್ಜುನ ಅನುಷ್ಕಾ ಶೆಟ್ಟಿ ಎಂದು ಬದಲಿಸಿದರು. ನಾಗಾರ್ಜುನ ಜೊತೆ 'ಸೂಪರ್' ಚಿತ್ರದ ಮೂಲಕ ನಟಿಸಲು ಆರಂಭಿಸಿದ ಅನುಷ್ಕಾ ಶೆಟ್ಟಿ ನಂತರ ವಿಕ್ರಮಾರ್ಕುಡು, ಅಸ್ತ್ರಂ, ಕಿಂಗ್, ಅರುಂಧತಿ, ಬಿಲ್ಲಾ, ಸಿಂಗಂ, ಖಲೇಜ, ಮಿರ್ಚಿ, ಸೈಜ್ ಜೀರೋ, ರುದ್ರಮ ದೇವಿ, ಭಾಗಮತಿ ಬಾಹುಬಲಿ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿದರು. ಇತ್ತೀಚೆಗೆ ಅನುಷ್ಕಾ ಅಭಿನಯದ 'ನಿಶ್ಯಬ್ಧಂ' ಚಿತ್ರ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಅನುಷ್ಕಾ ಮಾತು ಬಾರದ ಯುವತಿಯಾಗಿ ನಟಿಸಿದ್ದು ಅನುಷ್ಕಾ ಅಭಿನಯಕ್ಕೆ ಉತ್ತಮ ಪ್ರಶಂಸೆ ದೊರೆತಿದೆ.
ಒಳ್ಳೆ ಸ್ಕ್ರಿಪ್ಟ್ ದೊರೆತರೆ ಕನ್ನಡದಲ್ಲಿ ನಟಿಸುವುದಾಗಿ ಅನುಷ್ಕಾ ಅನೇಕ ಸಂದರ್ಶನಗಳಲ್ಲಿ ಹೇಳಿದ್ದಾರೆ. ತೆಲುಗಿನಲ್ಲಿ ಹೆಸರು ಮಾಡಿದ್ದರೂ ಅನುಷ್ಕಾ ಕನ್ನಡವನ್ನು ಮಾತ್ರ ಮರೆತಿಲ್ಲ. ಆಗ್ಗಾಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಕನ್ನಡದಲ್ಲಿ ಪೋಸ್ಟ್ಗಳನ್ನು ಹಂಚಿಕೊಳ್ಳುವ ಮೂಲಕವೇ ಅನುಷ್ಕಾ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಅನುಷ್ಕಾ ಆದಷ್ಟು ಬೇಗ ಕನ್ನಡ ಸಿನಿಮಾದಲ್ಲಿ ನಟಿಸಲಿ ಎಂದು ಅಭಿಮಾನಿಗಳು ಕೂಡಾ ಕಾಯುತ್ತಿದ್ದಾರೆ.