ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರಿಗೆ ಕೇಂದ್ರ ಸರ್ಕಾರ ನೀಡುವ ಅತ್ಯುನ್ನತ ಪ್ರಶಸ್ತಿಯಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿದೆ. ಈ ವಿಷಯವನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜವಡೇಕರ್ ಟ್ವಿಟರ್ ಮೂಲಕ ತಿಳಿಸಿ, ಬಿಗ್ ಬಿಗೆ ಶುಭಾಶಯ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ನೀಡುವ ಈ ಪ್ರತಿಷ್ಠಿತ ಪ್ರಶಸ್ತಿಯ ಆಯ್ಕೆ ಸಮಿತಿಯಲ್ಲಿ ಕನ್ನಡದ ಹೆಸರಾಂತ ನಿರ್ದೇಶಕ ಟಿ.ಎಸ್.ನಾಗಾಭರಣ, ಹಿರಿಯ ಗಾಯಕಿ ಆಶಾ ಬೋಂಸ್ಲೆ, ಅನಿಲ್ ಕಪೂರ್, ರಮೇಶ್ ಸಿಪ್ಪಿ, ಕರಣ್ ಜೋಹರ್ ಇದ್ದಾಋಎ. ಈ ಸಮಿತಿ ಫಾಲ್ಕೆ ಪ್ರಶಸ್ತಿಗೆ ಅಮಿತಾಬ್ ಅವರನ್ನು ಒಮ್ಮತದಿಂದ ಆಯ್ಕೆ ಮಾಡಿದೆ.
ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ಭಾರತೀಯ ಚಿತ್ರರಂಗಕ್ಕೆ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಅಮಿತಾಬ್ ಬಚ್ಚನ್ ಅವರಿಗೆ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅಲ್ಲದೆ ಬಿಗ್-ಬಿ ಅವರಿಗೆ ಈಗಾಗಲೇ ಕೇಂದ್ರ ಸರ್ಕಾರದ ಪ್ರತಿಷ್ಠಿತ ಪದ್ಮಶ್ರೀ, ಪದ್ಮ ಭೂಷಣ, ಪದ್ಮ ವಿಭೂಷಣ ಪ್ರಶಸ್ತಿ ಸಿಕ್ಕಿದ್ದು, ಈಗ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನೂ ಅಮಿತಾಬ್ ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಕೇಂದ್ರ ಸರ್ಕಾರ ನೀಡುವ ಅತ್ಯುನ್ನತ ಗೌರವವಾದ ಈ ಪ್ರಶಸ್ತಿ 1995ರಲ್ಲೇ ಕನ್ನಡದ ಮೇರುನಟ ಡಾ. ರಾಜ್ ಕುಮಾರ್ ಅವರಿಗೆ ಲಭಿಸಿದೆ.