ಗುರುವಿನ ಪ್ರತಿಮೆ ಮುಂದೆ ನಿಂತು ಬಿಲ್ಲು ವಿದ್ಯೆ ಕಲಿತ ಏಕಲವ್ಯ ಜಗತ್ತಿನಲ್ಲಿ ಅತ್ಯುತ್ತಮ ಶಿಷ್ಯ ಎಂಬ ಮಾತು ಈಗಲೂ ಚಾಲ್ತಿಯಲ್ಲಿದೆ. ಈಗ ಅದೇ ರೀತಿ ಗುರು ಇಲ್ಲದೆ ತನ್ನ ಸ್ವಂತ ಪರಿಶ್ರಮದಿಂದ ಸಮರ ಕಲೆ, ಯೋಗಾಸನ ಕಲಿತಿರುವ ಇವರು ಈಗ ಸಿನಿಮಾದಲ್ಲೂ ಮಿಂಚಲು ರೆಡಿಯಾಗಿದ್ದಾರೆ.
ಕಲಿಯುಗದ ಏಕಲವ್ಯ ಸ್ಯಾಂಡಲ್ವುಡ್ನಲ್ಲಿ ಸದ್ದು ಮಾಡಲು ರೆಡಿಯಾಗುತ್ತಿದ್ದಾರೆ. ನವ ನಟ ಏಕಲವ್ಯ ನಾಯಕನಾಗಿ ನಟಿಸಿರುವ 'ಕಲಿವೀರ' ಚಿತ್ರ ಸೆಟ್ಟೇರಿದಾಗಿನಿಂದಲೂ ಸುದ್ದಿಯಲ್ಲಿದೆ. ಚಿತ್ರದ ಪೋಸ್ಟರ್ ಸಿನಿಪ್ರಿಯರಲ್ಲಿ ಕ್ಯೂರಿಯಾಸಿಟಿ ಹೆಚ್ಚಿಸಿದೆ. ಸಿನಿಮಾ ಶೂಟಿಂಗ್ ಮುಗಿದಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಈ ಗ್ಯಾಪ್ನಲ್ಲಿ ಚಿತ್ರತಂಡ ಸಿನಿಮಾ ಮೇಕಿಂಗ್ ವಿಡಿಯೋ ರೆಡಿ ಮಾಡಿದ್ದು ಇದು ಒಳ್ಳೆ ಪ್ರತಿಕ್ರಿಯೆ ಪಡೆದಿದೆ.
'ಕಲಿವೀರ' ಚಿತ್ರವನ್ನು 'ಕನ್ನಡ ದೇಶದೋಳ್' ಚಿತ್ರದ ನಿರ್ದೇಶಕ ಅವಿ ನಿರ್ದೇಶಿಸಿದ್ದಾರೆ. ಅವಿರಾಮ್ ತಮ್ಮ ಹೆಸರನ್ನು ಅವಿನಾಶ್ ಭೂಷಣ್ ಎಂದು ಬದಲಿಸಿಕೊಂಡಿದ್ದರು. ಈಗ ಅವರು ಅವಿ ಆಗಿದ್ದಾರೆ. ಕಬ್ಬಿಣದ ಅಂಗಡಿ ಬ್ಯುಸ್ನೆಸ್ ಹೊಂದಿರುವ ಶ್ರೀನಿವಾಸ್ ಎಂಬುವವರು 'ಕಲಿವೀರ'ನಿಗೆ ಬಂಡವಾಳ ಹೂಡಿದ್ದಾರೆ.
ಚಿತ್ರದಲ್ಲಿ ಆ್ಯಕ್ಷನ್, ಹಾರರ್, ಕಾಮಿಡಿ, ಲವ್, ಸಸ್ಪೆನ್ಸ್ ಎಲ್ಲಾ ಅಂಶಗಳು ಇದ್ದು ಸಿನಿ ರಸಿಕರಿಗೆ ಬೇಕಾದ ಎಲ್ಲಾ ಮನರಂಜನೆ ಚಿತ್ರದಲ್ಲಿದೆ ಎಂದು ಚಿತ್ರತಂಡ ತಿಳಿಸಿದೆ. ಕೊರೊನಾ ವೈರಸ್ ನಿಯಂತ್ರಣಕ್ಕೆ ಬಂದು ಥಿಯೇಟರ್ ತೆರೆದ ಬಳಿಕ ಸಿನಿಮಾ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಅವಿ ತಿಳಿಸಿದ್ದಾರೆ.