ಬೆಂಗಳೂರು: ಡ್ರಗ್ಸ್ ಡೀಲ್ ಪ್ರಕರಣ ಸಂಬಂಧ ಒಮ್ಮೆ ವಿಚಾರಣೆಗೆ ಹಾಜರಾಗಿ ನಿಟ್ಟುಸಿರು ಬಿಟ್ಟಿರುವ ನಿರೂಪಕ ಅಕುಲ್ ಬಾಲಾಜಿಯ ಹಿನ್ನೆಲೆಯನ್ನ ಸಿಸಿಬಿ ಕಲೆ ಹಾಕುತ್ತಿದೆ. ಅಕುಲ್ ಬಾಲಾಜಿ ಹಾಗೂ ಬಂಧಿತ ಆರೋಪಿಗಳು ಪ್ರತಿಷ್ಠಿತ ಹಲವಾರು ಪಾರ್ಟಿಯಲ್ಲಿ ಭಾಗಿಯಾರುವ ಫೋಟೋಗಳು ಸಿಸಿಬಿ ಕೈ ಸೇರಿವೆ. ಸದ್ಯ ಅಕುಲ್ ಎರಡು ಮೊಬೈಲ್ ಜಪ್ತಿಯಾಗಿರುವುದರಿಂದಾಗಿ, ಅಕುಲ್ ಹಾಗೂ ಬಂಧಿತ ಆರೋಪಿಗಳ ಜತೆಗಿನ ನಂಟನ್ನ ಒಂದೊಂದಾಗಿ ಪತ್ತೆ ಹಚ್ಚುತ್ತಿದ್ದಾರೆ.
ವೈಭವ್ ಜೈನ್ ಜತೆಗಿನ ಹಣಕಾಸಿನ ವ್ಯವಹಾರವೇ ಸಂಕಷ್ಟ ತಂದೊಡ್ಡುವ ಸಾಧ್ಯತೆ!
ಅಕುಲ್ ಬಾಲಾಜಿಗೆ ಪ್ರಕರಣದಲ್ಲಿ ಬಂಧಿತನಾಗಿರುವ ಚಿನ್ನದ ವ್ಯಾಪಾರಿ ಮಗ, ನಟಿ ರಾಗಿಣಿಯ ಆಪ್ತ ಎ-5 ಆರೋಪಿ ವೈಭವ್ ಜೈನ್ ಜೊತೆಗೆ ಬಹಳಷ್ಟು ಹಣಕಾಸಿನ ವ್ಯವಹಾರ ನಡೆಸಿದ್ದಾರೆ. ಕೇವಲ ಹಣಕಾಸಿನ ವ್ಯವಹಾರಕ್ಕಷ್ಟೇ ಸೀಮಿತವಾಗಿಲ್ಲ ಎನ್ನಲಾಗ್ತಿದೆ. ಇದೇ ಜಾಡು ಹಿಡಿದು ಸಿಸಿಬಿ ಹೊರಟಿದ್ದು, ಡ್ರಗ್ಸ್ ವ್ಯವಹಾರದ ಘಾಟಿನ ಕುರಿತು ತನಿಖೆಗೆ ಇಳಿದಿದ್ದಾರೆ.
ಅಕುಲ್ ಬಾಲಾಜಿ ದೊಡ್ಡಬಳ್ಳಾಪುರ ಸಮೀಪ ರೆಸಾರ್ಟ್ ಹೊಂದಿದ್ದು, ಇದನ್ನ ಲೀಸ್ಗೆ ನೀಡಿದ್ದಾಗಿ ಅಕುಲ್ ಬಾಲಾಜಿ ಹೇಳಿದ್ದಾರೆ. ಆದರೆ, ಬಂಧಿತರು ಅಕುಲ್ ರೆಸಾರ್ಟ್‌ನಲ್ಲಿ ಪಾರ್ಟಿ ಮಾಡಿ ಡ್ರಗ್ಸ್ ಸೇವನೆ ಮಾಡಿದಕ್ಕೆ ಪೊಲೀಸರಿಗೆ ಕುರುಹು ಸಿಕ್ಕಿದೆ. ಆದರೆ, ಅಕುಲ್ ಮಾತ್ರ ಇದು ನನಗೆ ಮಾಹಿತಿ ಇಲ್ಲ. ಯಾರೆಲ್ಲಾ, ಪಾರ್ಟಿಯಲ್ಲಿ ಭಾಗಿಯಾಗುತ್ತಿದ್ದರು ? ಲಿಂಕ್ ಹೇಗೆ ? ಡ್ರಗ್ಸ್ ಸಫ್ಲೈ ಮಾಡ್ತಿದ್ದವರಾರು ಅನ್ನೋದು ನನಗೆ ಗೊತ್ತಿಲ್ಲ ಎಂದಿದ್ದಾರೆ. ಹೀಗಾಗಿ, ಸಿಡಿಆರ್ ದಾಖಲೆ ಹಿಡಿದು ಪಕ್ಕಾ ಮಾಹಿತಿ ಕಲೆ ಹಾಕಿ, ಬಂಧಿತರು ಮತ್ತು ಅಕುಲ್ ಮಾತುಕತೆಗೆ ಪೂರಕ ದಾಖಲೆಗಳ, ಟೆಕ್ನಿಕಲ್ ಅನಾಲಿಸಿಸ್ ನಡೆಸಿ, ದಾಖಲೆಗಳನ್ನ ಆಧರಿಸಿ ಅವಶ್ಯ ಸಂದರ್ಭ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲು ನಿರ್ಧಾರ ಮಾಡಿದ್ದಾರೆ.
ಹಾಗೆ ಅಕುಲ್ ಹೊಂದಿರುವ ಆಸ್ತಿ, ವಹಿವಾಟು ಬಗ್ಗೆ ಕೂಡ ಮಾಹಿತಿ ಕಲೆ ಹಾಕಿದ್ದಾರೆ. ಅಕುಲ್ ಕೇವಲ ಕಾರ್ಯಕ್ರಮ ನಿರೂಪಕನಾಗಿದ್ದಾನೆ. ಆದರೆ, ಅಕುಲ್ ಐಷಾರಾಮಿ ಜೀವನ ನಡೆಸುತ್ತಿರುವುದೇ ಮತ್ತೊಂದೆಡೆ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಸದ್ಯ ಅಕುಲ್ ಪ್ರತಿ ವ್ಯವಹಾರದ ಬಗ್ಗೆ ಸಿಸಿಬಿ ಮಾಹಿತಿ ಕಲೆ ಹಾಕ್ತಿದೆ.