ನಿತ್ಯೋತ್ಸವ ಕವಿ ಎಂದೇ ಹೆಸರಾಗಿದ್ದ ಖ್ಯಾತ ಸಾಹಿತಿ ಪ್ರೊ. ಕೆ.ಎಸ್. ನಿಸಾರ್ ಅಹಮದ್ ನಿನ್ನೆ ನಿಧನರಾಗಿದ್ದು ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವುಂಟಾಗಿದೆ. ಕೊಕ್ಕರೆಹೊಸಳ್ಳಿ ಶೇಖ್ಹೈದರ್ ನಿಸಾರ್ ಅಹಮದ್ ಅವರು ಕೆ.ಎಸ್. ನಿಸಾರ್ ಅಹಮದ್ ಎಂದೇ ಖ್ಯಾತರಾಗಿದ್ದರು.
ಕವಿ ನಿಸಾರ್ ಅಹಮದ್ ನಿಧನಕ್ಕೆ ರಾಜಕಾರಣಿಗಳು, ಸಾಹಿತಿಗಳು, ಸಿನಿಮಾ ನಟರು ಸೇರಿ ಇಡೀ ರಾಜ್ಯದ ಜನತೆಯೇ ಸಂತಾಪ ಸೂಚಿಸಿದ್ದಾರೆ. ಕವಿಯೂ ಆಗಿರುವ ನಿರ್ದೇಶಕ ಯೋಗರಾಜ್ ಭಟ್ ಕವಿ ನಿಸಾರ್ ಅಹಮದ್ ಅವರ ನಿಧನಕ್ಕೆ ವಿಭಿನ್ನ ರೀತಿಯಲ್ಲಿ ಸಂತಾಪ ಸೂಚಿಸಿದ್ದಾರೆ. ಅಗಲಿದ ನಿತ್ಯೋತ್ಸವ ಕವಿಗೆ ಕವಿತೆ ಬರೆಯುವ ಮೂಲಕ ಭಾವಪೂರ್ಣ ವಿದಾಯ ಹೇಳಿದ್ದಾರೆ. ಯೋಗರಾಜ್ ಭಟ್ ಬರೆದಿರುವ ಕವಿತೆಗಳ ಸಾಲು ಈ ರೀತಿ ಇವೆ.
'ನಿಧನ ನಗುವನು ಚೆಲ್ಲಿ ಹೃದಯವಾಗಿದೆ ಖಾಲಿ...ಮರಳಿ ಕೇಳುವ ಬನ್ನಿ ಕವಿ ನಿಸಾರರ ಲಾಲಿ...ವಂದನೆ, ಅಭಿನಂದನೆ...ಜನಿಸಿ ಬಂದರು ಅವರು ಎಂದು ತಿಳಿಯಬೇಕಿದೆ ನಾವು ಇಂದು, ಉಸಿರು ನಿಂತರು ನೆನಪು ನಿಲ್ಲುವುದೇ? ಹೋಗಿ ಬನ್ನಿ ಕವಿಗಳೇ ತಮಗೆ ಮುಡಿಪಿದು ಗಾಯನ...ಮರೆಯಲಾರೆವು ಎಂದಿಗು ತಾವು ಕಲಿಸಿದ ಜೀವನ...'
ಎಂಬ ಸುಂದರವಾದ ಸಾಲುಗಳ ಕವಿತೆ ಬರೆಯುವ ಮೂಲಕ ನಿಸಾರ್ ಅಹಮದ್ ಅವರಿಗೆ ಯೋಗರಾಜ್ ಭಟ್ ಶ್ರದ್ಧಾಂಜಲಿ ಅರ್ಪಿಸಿದ್ಧಾರೆ.