'ಕಾಮಿಡಿ ಕಿಲಾಡಿಗಳು' ಖ್ಯಾತಿಯ ಶಿವರಾಜ್ ಕೆ.ಆರ್. ಪೇಟೆ ಹಾಗೂ ಸಿಂಬಾ ಎಂಬ ಶ್ವಾನ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ನಾನು ಮತ್ತುಗುಂಡ' ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಶ್ವಾನ ಮತ್ತು ಆಟೋ ಚಾಲಕನ ನಡುವಿನ ಬಾಂಧವ್ಯದ ಕಥೆ ಆಧರಿಸಿರುವ ಈ ಚಿತ್ರವನ್ನು ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶಿಸಿದ್ದಾರೆ.
ಚಿತ್ರದ ಸಕ್ಸಸ್ ಖುಷಿಯನ್ನು ಹಂಚಿಕೊಳ್ಳಲು ಇಂದು ಚಿತ್ರತಂಡ ಸುದ್ದಿಗೋಷ್ಠಿ ಏರ್ಪಡಿಸಿತ್ತು. ಈ ಖುಷಿಯ ನಡುವೆ ಒಂದು ಕಣ್ಣೀರಿನ ಕಥೆಯೊಂದು ನಡೆಯಿತು. ನಿರ್ದೇಶಕ ಶ್ರೀನಿವಾಸ್ ತಿಮ್ಮಯ್ಯ ತನ್ನ ತಾಯಿಯನ್ನು ನೆನೆದು ಕಣ್ಣೀರಿಟ್ಟರು. ಚಿತ್ರರಂಗದಲ್ಲಿ ಸುಮಾರು 10 ವರ್ಷಗಳ ಕಾಲ ಕಷ್ಟಪಟ್ಟದ್ದು ಅಲ್ಲದೆ ಪ್ರೇಮಿಗಾಗಿ, ಬತಾಸ್ ಎಂಬ ಸಿನಿಮಾ ಮಾಡುವಾಗ ತನ್ನ ತಾಯಿಯನ್ನು ಕಳೆದುಕೊಂಡ ಘಟನೆ ನೆನೆದು ಕಣ್ಣೀರು ಹಾಕಿದರು. ಅವರ ತಾಯಿ ಕ್ಯಾನ್ಸರ್ನಿಂದ ಬಳಲುತ್ತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಶ್ರೀನಿವಾಸ್ ಸಿನಿಮಾ ಮಾಡಲು ಅಲೆದಾಡುತ್ತಿದ್ದರು. ಸಿನಿಮಾ ಹುಚ್ಚು ಬಿಡು ಎಂದು ತಾಯಿ ಎಷ್ಟು ಹೇಳಿದರೂ ಶ್ರೀನಿವಾಸ್ ಆ ಮಾತಿನ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ.
ಸಿನಿಮಾ ಮೇಲೆ ಎಷ್ಟು ಆಸೆ ಇತ್ತೆಂದರೆ ಆಸ್ಪತ್ರೆಯ ಒಂದು ಕೋಣೆಯನ್ನೇ ಸಿನಿಮಾ ಆಫೀಸ್ನಂತೆ ಮಾಡಿಕೊಂಡಿದ್ದೆ. ಯಾರೋ ಒಬ್ಬರನ್ನು ನಂಬಿಕೊಂಡು ನಾನು ಮನೆ, ಮಠ, ತಾಯಿಯನ್ನು ಕಳೆದುಕೊಂಡು ಬೀದಿಗೆ ಬಂದೆ. ಶ್ವಾನಕ್ಕೆ ಇರುವ ನಿಯತ್ತು ಮನುಷ್ಯನಿಗೆ ಇಲ್ಲ ಎಂದು ಕಣ್ಣೀರು ಹಾಕಿದರು. ಈ ವೇಳೆ ಶಿವರಾಜ್ ಕೆ.ಆರ್. ಪೇಟೆ ಹಾಗೂ ಇನ್ನಿತರರು ಸಮಾಧಾನ ಮಾಡಲು ಯತ್ನಿಸಿದರು. ಶ್ರೀನಿವಾಸ್ ಅವರ 10 ವರ್ಷಗಳ ಶ್ರಮಕ್ಕೆ ಕೊನೆಗೂ ಪ್ರತಿಫಲ ಸಿಕ್ಕಿರುವುದು ಖುಷಿಯ ವಿಚಾರ.