ಕೆಲವು ತಿಂಗಳುಗಳ ಹಿಂದೆ ಮಾಜಿ ಡಾನ್ ಮುತ್ತಪ್ಪ ರೈ ಅವರ ಜೀವನವನ್ನಾಧರಿಸಿ ‘ಎಂಆರ್’ ಎಂಬ ಚಿತ್ರವನ್ನು ಮಾಡುವುದಾಗಿ ಘೋಷಿಸಿದ್ದರು ರವಿ ಶ್ರೀವತ್ಸ. ಈ ಚಿತ್ರದ ಮೂಲಕ ನಿರ್ಮಾಪಕ ರಾಜಣ್ಣ ಅವರ ಮಗ ದೀಕ್ಷಿತ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸುವುದಕ್ಕೆ ಹೊರಟಿದ್ದರು.
ಚಿತ್ರದ ಮುಹೂರ್ತವೂ ಆಗಿ, ಇನ್ನೇನು ಚಿತ್ರೀಕರಣ ಪ್ರಾರಂಭವಾಗಬೇಕು ಎನ್ನುವಷ್ಟರಲ್ಲಿ ಮುತ್ತಪ್ಪ ರೈ ಕಡೆಯವರು ಈ ಚಿತ್ರದ ನಿರ್ಮಾಣಕ್ಕೆ ತಡೆಯೊಡ್ಡಿದರು. ಆ ಚಿತ್ರವನ್ನು ಅಲ್ಲಿಗೇ ಬಿಟ್ಟ ರವಿ ಶ್ರೀವತ್ಸ, ಆ ನಂತರ ಡಿಆರ್ ಎಂಬ ಇನ್ನೊಂದು ಚಿತ್ರ ಮಾಡುವುದಾಗಿ ಪತ್ರಿಕಾಗೋಷ್ಠಿ ಕರೆದು ಹೇಳಿದರು. ಈಗ ಆ ಚಿತ್ರವನ್ನೂ ಅವರು ಕೈಬಿಟ್ಟು ಡಿ3 ಚಿತ್ರಕ್ಕೆ ಕೈಹಾಕಿದ್ದಾರೆ.
ಇಂದು ದೀಕ್ಷಿತ್ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಅವರು ಡೆಡ್ಲಿ 3 ಚಿತ್ರವನ್ನು ಘೋಷಿಸಿದ್ದಾರೆ. ಈ ಚಿತ್ರದ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ರವಿ ಶ್ರೀವತ್ಸ, ಲಾಕ್ಡೌನ್ ಮುಗಿದ ಮೇಲೆ ಚಿತ್ರವನ್ನು ಶುರು ಮಾಡುತ್ತಾರಂತೆ.
ಎಂಆರ್ ಚಿತ್ರಕ್ಕೆ ಕೆಲಸ ಮಾಡಿದ್ದ ಕಲಾವಿದರು ಮತ್ತು ತಂತ್ರಜ್ಞರೇ ಈ ಚಿತ್ರದಲ್ಲೂ ಮುಂದುವರೆಯುವ ಸಾಧ್ಯತೆ ಇದೆ. ಎಂಆರ್, ಡಿಆರ್ನಂತೆ ಡಿ3 ಚಿತ್ರವೂ ನಿಲ್ಲದೆ ಮುಂದುವರೆಯಲಿ ಎಂಬುದಷ್ಟೇ ಈ ಸಂದರ್ಭದಲ್ಲಿ ಹಾರೈಸಬಹುದು.
ಡೆಡ್ಲಿ ಸೋಮಾ ಸೂಪರ್ ಹಿಟ್.. 2005ರಲ್ಲಿ ‘ಡೆಡ್ಲಿ ಸೋಮ’ ಸಿನಿಮಾ ಸೂಪರ್ ಹಿಟ್ ಆಯಿತು. ನಟ ಆದಿತ್ಯ ಅವರಿಗೆ ಆ ಚಿತ್ರದಿಂದ ದೊಡ್ಡ ಯಶಸ್ಸು ಸಿಕ್ಕಿತು. ನಿರ್ದೇಶಕ ರವಿ ಶ್ರೀವತ್ಸ ಅವರು ಗಾಂಧಿನಗರದಲ್ಲಿ ಭರವಸೆಯ ನಿರ್ದೇಶಕ ಎನಿಸಿಕೊಂಡರು.
ರಿಯಲ್ ಲೈಫ್ ಭೂಗತ ಲೋಕದ ಕಥೆಯನ್ನು ಹೊಂದಿದ್ದ ಆ ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಿಕೊಂಡರು. ನಂತರ 2010ರಲ್ಲಿ ಈ ಚಿತ್ರಕ್ಕೆ ಸೀಕ್ವೆಲ್ ಮಾಡಲಾಯಿತು. ‘ಡೆಡ್ಲಿ 2’ ಹೆಸರಲ್ಲಿ ಆ ಸಿನಿಮಾ ಮೂಡಿಬಂತು. ಅದಕ್ಕೂ ರವಿ ಶ್ರೀವತ್ಸ ನಿರ್ದೇಶನ ಮಾಡಿದ್ದರು. ನಾಯಕನಾಗಿ ಆದಿತ್ಯ ಮುಂದುವರಿದಿದ್ದರು.
ಈಗ ‘ಡೆಡ್ಲಿ 3’ ಸಿನಿಮಾ ಘೋಷಣೆ ಆಗಿದೆ. ಮತ್ತೆ ರವಿ ಶ್ರೀವತ್ಸ ನಿರ್ದೇಶನ ಮಾಡಲಿದ್ದಾರೆ. ಆದರೆ, ಈ ಬಾರಿ ಆದಿತ್ಯ ಹೀರೋ ಅಲ್ಲ ಎಂಬುದು ವಿಶೇಷ.
ಈ ಬಗ್ಗೆ ಸ್ವತಃ ರವಿ ಶ್ರೀವತ್ಸ ಮಾಹಿತಿ ನೀಡಿದ್ದಾರೆ. ಹೊಸ ಹೀರೋ ಎಂಆರ್ ದೀಕ್ಷಿತ್ ‘ಡೆಡ್ಲಿ 3’ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದರು. ‘ಡೆಡ್ಲಿ ಸೋಮ’ ಸಿನಿಮಾಗೆ ಬಂಡವಾಳ ಹೂಡಿದ್ದ ಶೋಭಾ ರಾಜಣ್ಣ ಅವರ ಪುತ್ರ ದೀಕ್ಷಿತ್ ಎಂಬುದು ಎಲ್ಲರಿಗೂ ಗೊತ್ತಿದೆ.
‘ಡೆಡ್ಲಿ ಸೋಮ’ ಚಿತ್ರದಲ್ಲಿ ಸೋಮನ ಬಾಲ್ಯದ ಪಾತ್ರವನ್ನು ಮಾಡಿದ್ದು ಇದೇ ದೀಕ್ಷಿತ್. ಈಗ ‘ಡೆಡ್ಲಿ 3’ ಚಿತ್ರಕ್ಕೆ ದೀಕ್ಷಿತ್ ಹೀರೋ. ಇಂದು ದೀಕ್ಷಿತ್ ಹುಟ್ಟುಹಬ್ಬವಾಗಿರುವುದರಿಂದ ಈ ಸುದ್ದಿಯನ್ನು ರವಿ ಶ್ರೀವತ್ಸ ಬಹಿರಂಗಪಡಿಸಿದ್ದಾರೆ.