ದೊಡ್ಮನೆ ಹುಡುಗ ಪುನೀತ್ ರಾಜ್‌ಕುಮಾರ್ ಅಕಾಲಿಕ ಸಾವಿನಿಂದ ಇಡೀ ಭಾರತೀಯ ಚಿತ್ರರಂಗವೇ ಆಘಾತಗೊಂಡಿದೆ. ಅಪ್ಪು ಜೊತೆ ಜೇಮ್ಸ್ ಸಿನಿಮಾ ನಿರ್ದೇಶಿಸಿರುವ ಚೇತನ್ ಕುಮಾರ್ ಪುನೀತ್ ವ್ಯಕ್ತಿತ್ವವನ್ನು ತಮ್ಮದೇ ಪದಗಳಲ್ಲಿ ಬಣ್ಣಿಸಿದ್ದಾರೆ.
ಚೇತನ್ ಕುಮಾರ್ ಬರೆದುಕೊಂಡಿದ್ದು..
ದೊಡ್ಮನೆಯ ದೊರೆ ನಿಮ್ಮಿಂದ ಕಲಿತದ್ದು ಒಂದೆರಡಲ್ಲ. ನಿಮ್ಮ ವ್ಯಕ್ತಿತ್ವ ಬಣ್ಣಿಸಲು ಅಕ್ಷರ ಸಾಲುತ್ತಿಲ್ಲ. ಸದಾ ಹಸನ್ಮುಖಿ, ತಾಳ್ಮೆಯ ಪ್ರತಿರೂಪ, ಎಲ್ಲರೂ ನಮ್ಮವರೆಂದು ಭಾವಿಸುವ ವಿಶೇಷಗುಣ. ಎಲ್ಲರನ್ನೂ ಸಮಾನವಾಗಿ ಕಾಣುವ ಮಗು ಮನಸ್ಸು. ಚಿತ್ರರಂಗವೇ ಕುಟುಂಬವೆಂದು ಭಾವಿಸುವ ಸಂಸ್ಕಾರ. ಮಹಾಸಂತನ ಸೌಮ್ಯತೆ, ಭೂಮಿ ತೂಕದ ಘನತೆ, ಕಷ್ಟಕ್ಕೆ ಮಿಡಿಯುವ ಹೃದಯ, ಕೈಲಾದಷ್ಟು ಸಹಾಯ ಮಾಡುವ ಉದಾರತೆ, ಬಲಗೈಲಿ ಕೊಟ್ಟಿದ್ದು ಎಡಗೈಗೆ ತಿಳಿಯಬಾರದೆಂಬ ನೀತಿ ಎಲ್ಲರಿಗೂ ಮಾದರಿ.
ದಿನನಿತ್ಯ ಶಿಸ್ತಿನ ವ್ಯಾಯಾಮ, ಆರೋಗ್ಯದ ಮೇಲೆ ಕಾಳಜಿ, ಆಹಾರವನ್ನು ಪ್ರೀತಿಸುವ ಗುಣ, ಸದಾ ಹೊಸತನವನ್ನು ಹಿಂಬಾಲಿಸುವ, ಅನ್ವೇಷಿಸುವ, ವಿಶ್ಲೇಷಿಸುವ ಮನೋಭಾವ, ಸಮಯಪ್ರಜ್ಞೆ ಹಾಗೂ ಸಮಯದ ಮೇಲಿಟ್ಟಿದ್ದ ಗೌರವ. ಸದಾ ಒಂದಲ್ಲೊ೦ದು ಕೆಲಸದಲ್ಲಿ ಮಗ್ನರಾಗುತ್ತಿದ್ದ ರೀತಿ. ಎಲ್ಲಾ ಕ್ಷೇತ್ರಗಳ ಬಗ್ಗೆಯೂ ಮಾಹಿತಿ ತಿಳಿಯುವ ಹಂಬಲ ಹಾಗೂ ಕುತೂಹಲ, ಅಪಾರ ವ್ಯವಹಾರಜ್ಞಾನ, ಕುಟುಂಬಕ್ಕೆ ಮೊದಲ ಆದ್ಯತೆ, ಸ್ನೇಹಕ್ಕೆ ನೀಡುತ್ತಿದ್ದ ಮನ್ನಣೆ. ಸಂಬಂಧಗಳಿಗೆ ನೀವು ತೋರುತ್ತಿದ್ದ ಪ್ರೀತಿ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
ನಿಮ್ಮ ಒಡನಾಟ ನೀಡಿದ್ದಕ್ಕೆ, ಸದಾ ಪ್ರೋತ್ಸಾಹಿಸಿ ಬೆನ್ನು ತಟ್ಟಿದ್ದಕ್ಕೆ, ನಿಮ್ಮ ಜೀವನದ ಪುಟಗಳಲ್ಲಿ ಒಂದೆರಡು ಸಾಲುಗಳನ್ನು ನೀಡಿದ್ದಕ್ಕೆ, ನಿಮ್ಮೊಡನೆ ಕಳೆದ ಪ್ರತಿ ಕ್ಷಣವೂ ದೇವರು ಕೊಟ್ಟ ವರವೆಂದೇ ಭಾವಿಸುತ್ತೇನೆ. ನಿಮ್ಮವನಾಗಿ ಸ್ವೀಕರಿಸಿದ್ದಕ್ಕೆ ನಿಮಗೆ ಸದಾ ಚಿರರುಣಿ. ನಿಮ್ಮಂತಹ ಮಹಾನ್ ಚೇತನಗಳಿಗೆ ಆ ದೇವರು ಎಂದೆಂದೂ ದೀರ್ಘ ಆಯುಷ್ಯ ನೀಡುವಂತಾಗಲಿ. ನಿಮ್ಮ ಅಭಿಮಾನಿಗಳಿಗೆ, ಇಡೀ ಚಿತ್ರರಂಗಕ್ಕೆ ಹಾಗೂ ನಿಮ್ಮ ಕುಟುಂಬಕ್ಕೆ ನಿಮ್ಮ ಅಗಲಿಕೆಯ ನೋವನ್ನು ಭರಿಸುವ೦ತಹ ಶಕ್ತಿ ನೀಡಲಿ. ಮತ್ತೆ ಹುಟ್ಟಿ ಬನ್ನಿ ಅಪ್ಪು ಸರ್ ಎಂದು ಬರೆದುಕೊಂಡಿದ್ದಾರೆ.
ಇದೇ ವೇಳೆ, ಜೇಮ್ಸ್ ಸಿನಿಮಾ ಚಿತ್ರೀಕರಣಕ್ಕೆಂದು ಹೊಸಪೇಟೆಗೆ ಹೋದಾಗ ಪುನೀತ್, ಸರ್ಕಾರಿ ಶಾಲೆಗೆ ಲಕ್ಷದ ರೂಪದಲ್ಲಿ ಧನಸಹಾಯ ಸಹಾಯ ಮಾಡಿದ ವಿಚಾರವನ್ನು ನಿರ್ದೇಶಕರು ಬಿಚ್ಚಿಟ್ಟರು.
ಇದನ್ನೂ ಓದಿ: ನಮಗೆ ಹಾಲು-ತುಪ್ಪ ಕಾರ್ಯ ಮಾಡಬೇಕಿತ್ತು.. ಆದ್ರೆ, ನಾವು ಅವನಿಗೆ ಮಾಡುವ ಪರಿಸ್ಥಿತಿ ಬಂದಿದೆ : ಶಿವಣ್ಣ