ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ಹಾಸ್ಯ ನಟ ಡಿಂಗ್ರಿ ನಾಗರಾಜ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ಸಿಕ್ಕಿದೆ. 'ವರ್ಚುವಲ್ ಆಫ್ ಯೂನಿವರ್ಸಿಟಿ ಫಾರ್ ಪೀಸ್ ಆ್ಯಂಡ್ ಎಜುಕೇಷನ್ ಯೂನಿವರ್ಸಿಟಿ' ಚಿತ್ರರಂಗದಲ್ಲಿ ಡಿಂಗ್ರಿ ನಾಗರಾಜ್ ಅವರ ಸಾಧನೆ ಗುರುತಿಸಿ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ನೀಡಿದೆ.
ನಿನ್ನೆ ಭಾರತೀಯ ವಿದ್ಯಾಭವನದಲ್ಲಿ ನಡೆದ ಸಮಾರಂಭದಲ್ಲಿ ಡಿಂಗ್ರಿ ನಾಗರಾಜ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ. ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ತಮ್ಮ ತಂದೆಯ ಫೊಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. 'ಅಭಿನಂದನೆಗಳು ಅಪ್ಪ, ಇಷ್ಟು ವರ್ಷಗಳು ನೀವು ಚಿತ್ರರಂಗದಲ್ಲಿ ಕಷ್ಟಪಟ್ಟಿದ್ದಕ್ಕೆ ಈಗ ನಿನಗೆ ಗೌರವ ಡಾಕ್ಟರೇಟ್ ಸಿಕ್ಕಿದೆ. ಇದರಿಂದ ನನಗೆ ಸಂತೋಷವಾಗಿದೆ. ಮತ್ತೊಮ್ಮೆ ಅಭಿನಂದನೆಗಳು ಅಪ್ಪ' ಎಂದು ಅಪ್ಪನ ಸಾಧನೆಯನ್ನು ಹೆಮ್ಮೆಯಿಂದ ಗೌರವಿಸಿದ್ದಾರೆ. 'ಪರಸಂಗದ ಗೆಂಡೆತಿಮ್ಮ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಈ ವಾಮನ ಮೂರ್ತಿ, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಕನ್ನಡದ ಖ್ಯಾತ ನಟರ ಜೊತೆ ನಾಗರಾಜ್ ನಟಿಸಿದ್ದಾರೆ. ಸುಮಾರು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಣ್ಣ ಹಚ್ಚಿ ಸಿನಿಪ್ರಿಯರನ್ನು ರಂಜಿಸಿದ್ದಾರೆ.