ಏಳು ವರ್ಷಗಳ ಬಳಿಕ ಮನಸಾರೆ ಜೋಡಿ ಮತ್ತೆ ಸಿಲ್ವರ್ ಸ್ಕ್ರೀನ್ ಮೇಲೆ ಮಿಂಚಲಿದ್ದಾರೆ. ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಎಂಬ ಚಿತ್ರದಲ್ಲಿ ನಟಿಸಲಿದ್ದಾರೆ. ಶೇಕಡ 90 ರಷ್ಟು ಚಿತ್ರೀಕರಣ ಮುಗಿದಿದೆ. ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳಿಂದ ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ವಿನಾಯಕ ಕೋಡ್ಸರ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಸಿನಿಮಾ ಬಗ್ಗೆ ಚಿತ್ರತಂಡ ಮಾಧ್ಯಮಗೋಷ್ಟಿ ನಡೆಸಿದೆ. ಈ ವೇಳೆ ಮಾತನಾಡಿದ ನಿರ್ದೇಶಕ ವಿನಾಯಕ ಕೋಡ್ಸರ, ಮಲೆನಾಡಿನ ಕಥೆಯಿದು. ಆರಂಭದಲ್ಲಿ ದಿಗಂತ್ ಅವರನ್ನು ಸಿನಿಮಾಕ್ಕೆ ಹಾಕಿಕೊಳ್ಳಬೇಕು ಎಂದು ಯೋಚಿಸಿರಲಿಲ್ಲ. ಕಮರ್ಷಿಯಲ್ ನಟನನ್ನು ತೆಗೆದುಕೊಳ್ಳುವ ಯೋಚನೆಯಿತ್ತು. ಸಣ್ಣ ಬಜೆಟ್‌ನಲ್ಲಿ ಅಚ್ಚುಕಟ್ಟಾಗಿ ಸಿನಿಮಾ ಮಾಡುವುದು ನಮ್ಮ ಯೋಜನೆಯಾಗಿತ್ತು. ದಿಗಂತ್ ಬೇರೆಯವರ ಬಳಿ ಈ ಸಿನಿಮಾದ ಕಥೆ ಕೇಳಿ ಚೆನ್ನಾಗಿದೆ ಎಂದಿದ್ದರು. ನಂತರ ಅವರನ್ನು ಸಿನಿಮಾದಲ್ಲಿ ನಟಿಸುವಂತೆ ಕೇಳಿದೆವು. ಅವರು ಸಂತೋಷದಿಂದಲೇ ಒಪ್ಪಿದರು. 20 ದಿನಗಳ ಕಾಲ ಶೂಟಿಂಗ್ ಪೂರ್ಣಗೊಂಡಿದೆ. ಕಾಮಿಡಿ ಜಾನರ್‌ನಲ್ಲಿ ಕಥೆ ಸಾಗುತ್ತದೆ. ಕಲಾವಿದ ಯಾವಾಗ ಕೆಲಸವನ್ನು ಎಂಜಾಯ್ ಮಾಡುತ್ತಾನೋ ಆಗ ಪಾತ್ರಕ್ಕೆ ಜೀವ ತುಂಬುತ್ತಾನೆ. ಈ ಚಿತ್ರ ಎಲ್ಲರ ಮನಗೆಲ್ಲುತ್ತದೆ ಎಂಬ ನಂಬಿಕೆಯಿದೆ ಎಂದು ಹೇಳಿದರು.
ನಾನು ಮಲೆನಾಡಿನ ಹುಡುಗ. ಮಲೆನಾಡಿನ ಕಥೆಯ ಕುರಿತಾದ ಸಿನಿಮಾ ಮಾಡಬೇಕೆಂಬ ಆಸೆಯಿತ್ತು. ಈ ಹಿಂದೆ ಸಾಕಷ್ಟು ಕಥೆ ಕೇಳಿದ್ದರೂ ನನಗೆ ಯಾವುದು ಇಷ್ಟವಾಗಿರಲಿಲ್ಲ. ಅಡಿಕೆ ಬೆಳೆಗಾರ, ಹವ್ಯಕ ಬ್ರಾಹ್ಮಣ ಮಾಣಿ, ಎಂಎಟಿ ಗಾಡಿ, ಗೊಬ್ಬರದ ಅಂಗಡಿ ಇಟ್ಟುಕೊಂಡಿರುವ ಒಂದು ಪಾತ್ರ ಇರುವ ಕಥೆ ಇದು. ಈ ಸಿನಿಮಾದ ಕಥೆ ಕೇಳಿದಾಗ ತುಂಬ ಖುಷಿ ಆಯಿತು. ಪತ್ನಿಯೂ ಆಗಿರುವ ನಟಿ ಐಂದ್ರಿತಾ ರೇ ಜೊತೆ ಏಳು ವರ್ಷಗಳ ನಂತರ ಅಭಿನಯಿಸುತ್ತಿರುವೆ ಎಂದು ನಟ ದಿಗಂತ್ ತಿಳಿಸಿದರು.
2018ರಲ್ಲಿ ಈ ಸಿನಿಮಾ ಕಥೆಯನ್ನು ಕೇಳಿದ್ದೆ. ಈ ಚಿತ್ರದ ಕಥೆ ತುಂಬ ಇಷ್ಟವಾಗಿದೆ. ಮಲೆನಾಡಿನ ಹುಡುಗಿ ಸೌಮ್ಯಾ ಪಾತ್ರದಲ್ಲಿ ಅಭಿನಯಿಸಿರುವೆ. ದಿಗಂತ್ ಮತ್ತು ಸಿನಿಮಾ ತಂಡದವರು ಮಲೆನಾಡಿನ ಭಾಷೆ ಮಾತನಾಡುತ್ತಿದ್ದರು. ಆರಂಭದಲ್ಲಿ ನನಗೆ ಆ ಭಾಷೆ ಅರ್ಥವಾಗುತ್ತಿರಲಿಲ್ಲ. ಡಬ್ಬಿಂಗ್‌ನಲ್ಲಿ ಹೇಗೆ ಮಾತನಾಡುವು ಎಂಬ ದುಗುಡ ಇತ್ತು. ದಿಗಂತ್ ಮತ್ತು ಐಂದ್ರಿತಾ ಜೊತೆ ಕೆಲಸ ತುಂಬ ಖುಷಿ ನೀಡಿತು ಎಂದು ನಟಿ ರಂಜನಿ ರಾಘವನ್ ಹೇಳಿದರು.
ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ವರುಣ್ - ನತಾಶಾ
ಏಳು ವರ್ಷಗಳ ಹಿಂದೆ ಮನಸಾರೆ ಚಿತ್ರದಲ್ಲಿ ನಾನು ಮತ್ತು ದಿಗಂತ್ ಒಟ್ಟಾಗಿ ನಟಿಸಿದ್ದೆವು. ನನ್ನ ಮತ್ತು ದಿಗಂತ್ ಸಂಬಂಧ ತುಂಬ ವಿಶೇಷವಾದುದು. ಹೀಗಾಗಿ ವಿಶೇಷವಾದ ಸ್ಕ್ರಿಪ್ಟ್ನ್ನೇ ಆಯ್ಕೆ ಮಾಡಿಕೊಳ್ಳಬೇಕು ಎಂದುಕೊಂಡಿದ್ದೆ. ಈ ಸಿನಿಮಾದ ಹಾಡುಗಳು ತುಂಬಾ ಚೆನ್ನಾಗಿವೆ ಎಂದು ನಟಿ ಐಂದ್ರಿತಾ ರೇ ಹೇಳಿದರು.
ಇಬ್ಬರು ನಾಯಕಿಯರಿಗೆ ಹಾಡು ಇರುತ್ತದೆ. ಮತ್ತೊಂದು ಮಲೆನಾಡು ಕುರಿತಂತೆ ಗೀತೆ ಇರಲಿದೆ. ರಾಗ ಸಂಯೋಜನೆ ಮುಗಿದಿದೆ. ಸದ್ಯದಲ್ಲೇ ಗಾಯಕರಿಂದ ಹಾಡಿಸುವ ಕೆಲಸ ಬಾಕಿ ಇದೆ ಎಂದು ಸಂಗೀತ ಸಂಯೋಜಕ ಮತ್ತು ಸಹ ನಿರ್ಮಾಪಕ ಪ್ರಜ್ವಲ್ ಪೈ ತಿಳಿಸಿದರು.
ಉಪ್ಪಿ ಎಂಟರ್ ಟೈನರ್ ಬ್ಯಾನರ್ ಅಡಿಯಲ್ಲಿ ಸಿಲ್ಕ್ ಮಂಜು ಚಿತ್ರವನ್ನು ನಿರ್ಮಿಸಿದ್ದಾರೆ. ನಂದಕಿಶೋರ್ ಎನ್. ರಾವ್ ಕ್ಯಾಮರಾ ಕಣ್ಣಲ್ಲಿ ಚಿತ್ರ ಸೆರೆಯಾಗಿದೆ. ವೇಣು ಹಸ್ರಾಳಿ ಚಿತ್ರಕಥೆ ಸಂಭಾಷಣೆ ಬರೆದಿದ್ದಾರೆ. ಉಮಾಶ್ರೀ, ವಿದ್ಯಾ ಮೂರ್ತಿ, ಯಶವಂತ್ ಸರ್ದೇಶಪಾಂಡೆ, ಕಾಸರಗೂಡು ಚಿನ್ನ, ರವಿಕಿರಣ್, ನೀನಾಸಂ ರಂಗಭೂಮಿ ಕಲಾವಿದರ ತಾರಾಗಣ ಚಿತ್ರದಲ್ಲಿದೆ. ಚಿತ್ರವು ಮೇ ತಿಂಗಳಲ್ಲಿ ತೆರೆಗೆ ಬರುವ ಸಾದ್ಯತೆ ಇದೆ.