ಬೆಂಗಳೂರು: 2020 ಸಿನಿ ಜಗತ್ತಿಗೆ ಅತ್ಯಂತ ಕಠೋರ ವರ್ಷ ಎಂದೇ ಹೇಳಬಹುದು. ಕೊರೊನಾ ಸೋಂಕು ಕಾಣಿಸಿಕೊಂಡಾಗಿನಿಂದ ಬಾಗಿಲು ಮುಚ್ಚಿರುವ ಚಿತ್ರರಂಗ ಇಂದಿಗೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಸ್ಟಾರ್ ನಟರ ಸಿನಿಮಾಗಳು ಈ ವರ್ಷ ತೆರೆ ಮೇಲೆ ಬರಲೇ ಇಲ್ಲ. ಆದರೆ ಅಲ್ಲೊಂದು ಇಲ್ಲೊಂದು ಸಿನಿಮಾ ತೆರೆ ಕಂಡು ಒಂದಿಷ್ಟು ಸದ್ದು ಮಾಡಿದ್ದು ಬಿಟ್ಟರೆ ಸಿನಿಮಾ ಜಗತ್ತು ಮಂಕಾಗಿದೆ.
ವರ್ಷದ ಮೊದಲ ತಿಂಗಳು ಜನವರಿ ಮೂರನೇ ದಿನ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟ ಸಿನಿಮಾ ಅಂದ್ರೆ ಮಯೂರ್ ಪಾಟೇಲ್ ಅಭಿನಯದ ‘ರಾಜೀವ ಐಎಎಸ್’. ಈ ಚಿತ್ರವನ್ನ ಪ್ರೇಕ್ಷಕರು ಕೈ ಹಿಡಿಯಲಿಲ್ಲ. ಈ ಚಿತ್ರದ ಬಳಿಕ ತೆರೆ ಕಂಡ ಚಿತ್ರ ‘ಗುಡುಮನ ಅವಾಂತರ’ ಪ್ರೇಕ್ಷಕರಿಗೆ ಇಂತಂಹದೊಂದು ಚಿತ್ರ ರಿಲೀಸ್ ಆಗಿದೆ ಅನ್ನೋದು ಗೊತ್ತಾಗಲಿಲ್ಲ. ಜನವರಿ 3ರಿಂದ ಚಿತ್ರರಂಗದ ವರ್ಷ ಪ್ರಾರಂಭವಾಗಿ ಜನವರಿಯಲ್ಲಿ ಒಟ್ಟು 17 ಸಿನಿಮಾಗಳು ರಿಲೀಸ್ ಆಗಿದ್ದು, ನಂತರದ ವಾರದಲ್ಲಿ ಬಂದ ‘ಜನ್ ಧನ್’ ಮತ್ತು ‘ಶ್ರೀ ಭರತ ಬಾಹುಬಲಿ’ ಸಿನಿಮಾಗಳು ಸಹ ಪ್ರೇಕ್ಷಕರ ಮನ ಗೆಲ್ಲಲು ಯಶಸ್ವಿಯಾಗಲಿಲ್ಲ.
‘ಖಾಕಿ’ ಮತ್ತು ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಜನವರಿ 24ರಂದು ರಿಲೀಸ್ ಆಗಿದ್ದವು. ಚಿರಂಜೀವಿ ಸರ್ಜಾ ಅಭಿನಯದ ‘ಖಾಕಿ’ ಮತ್ತು ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಮತ್ತು ‘ನಾನು ಮತ್ತು ಗುಂಡ’ ಸಿನಿಮಾಗಳು ಕೊಂಚ ಸದ್ದು ಮಾಡಿದವಾದರೂ ನಿರ್ಮಾಪಕರ ಜೇಬು ತುಂಬಿಸಲಿಲ್ಲ.
ಕನ್ನಡ ಚಿತ್ರರಂಗಕ್ಕೆ ಸಿಹಿಯಾಗಿದ್ದು ‘ಲವ್ ಮಾಕ್ಟೈಲ್’
ಜನವರಿ ತಿಂಗಳ ಕೊನೆಯಲ್ಲಿ ‘ಲವ್ ಮಾಕ್ಟೈಲ್’ ಸೇರಿದಂತೆ ಬರೋಬ್ಬರಿ 17 ಸಿನಿಮಾಗಳು ರಿಲೀಸ್ ಆಗಿದ್ದವು. ಆದರೆ ಮಲಗಿದ್ದ ಚಿತ್ರರಂಗವನ್ನ ಬಡಿದೆಬ್ಬಿಸಿದ್ದು ‘ಲವ್ ಮಾಕ್ಟೈಲ್’ ಸಿನಿಮಾ ಮಾತ್ರ. ಚಿತ್ರಮಂದಿರಗಳು ಸಿಗದೆ ಪರದಾಡುತ್ತಿದ್ದ ‘ಲವ್ ಮಾಕ್ಟೈಲ್’ ಚಿತ್ರ ನಿಧಾನವಾಗಿ ಪ್ರೇಕ್ಷಕರನ್ನ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಯಿತು. ಕೊನೆಗೆ ಪ್ರೇಕ್ಷಕರು ಸಿನಿಮಾ ಒಪ್ಪಿಕೊಂಡ ಬಳಿಕ ಅದ್ಭುತ ಪ್ರದರ್ಶನ ಕಂಡಿತು. ಡಾರ್ಲಿಂಗ್ ಕೃಷ್ಣ ನಿರ್ದೇಶನದ ಮೊದಲ ಸಿನಿಮಾ ಇದಾಗಿದ್ದು, ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಮಿಂಚಿದ್ದರು.
ಪ್ರೇಕ್ಷಕರ ಮನ ಗೆದ್ದ ‘ದಿಯಾ’
ಲವ್ ಮಾಕ್ಟೈಲ್ ಸಕ್ಸಸ್ ಬಳಿಕ ರಿಲೀಸ್ ಆಗಿದ್ದು ‘ದಿಯಾ’ ಮತ್ತು ‘ಜೆಂಟಲ್ ಮನ್’ ಸಿನಿಮಾಗಳು. ಫೆಬ್ರವರಿ ಮೊದಲ ವಾರದಲ್ಲಿ ರಿಲೀಸ್ ಆದ ಒಟ್ಟು 8 ಸಿನಿಮಾಗಳಲ್ಲಿ ‘ದಿಯಾ’ ಮತ್ತು ‘ಜಂಟಲ್ ಮನ್’ ಎರಡು ಸಿನಿಮಾಗಳು ಗಮನ ಸೆಳೆದಿವೆ. ಇದರಲ್ಲಿ ‘6-5= 2’ ಸಿನಿಮಾ ಖ್ಯಾತಿಯ ಅಶೋಕ್ ನಿರ್ದೇಶನದ, ಯುವ ನಟರಾದ ದೀಕ್ಷಿತ್, ಪೃಥ್ವಿ ಅಂಬರ್ ಮತ್ತು ಖುಷಿ ನಟಿಸಿದ ‘ದಿಯಾ’ ಸಿನಿಮಾ ಈ ವರ್ಷದ ಉತ್ತಮ ಪ್ರದರ್ಶನ ಕಂಡ ಸಿನಿಮಾ.
‘ದಿಯಾ’ ಸಿನಿಮಾ ಬಳಿಕ ಬಂದ ಡಾಲಿ ಧನಂಜಯ್ ಅಭಿನಯದ ‘ಪಾಪ್ ಕಾರ್ನ್ ಮಂಕಿ ಟೈಗರ್’ ಹಾಗೂ ರಮೇಶ್ ಅರವಿಂದ್ ನಟನೆಯ ‘ಶಿವಾಜಿ ಸೂರತ್ಕಲ್’ ಫೆಬ್ರವರಿ 21ರಂದು ರಿಲೀಸ್ ಆಗಿ, ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾದವು. ದುನಿಯಾ ಸೂರಿ ನಿರ್ದೇಶನದ, ಧನಂಜಯ್ ಅಭಿನಯದ ‘ಪಾಪ್ ಕಾರ್ನ್ ಮಂಕಿ ಟೈಗರ್’ ಮತ್ತು ರಮೇಶ್ ಅರವಿಂದ್ ನಟನೆಯ ‘ಶಿವಾಜಿ ಸೂರತ್ಕಲ್’ ಸಿನಿಮಾಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಪಿಆರ್ಕೆ ಬ್ಯಾನರ್ನಲ್ಲಿ ಬಂದ ‘ಮಾಯಾ ಬಜಾರ್’ ಸಿನಿಮಾ ಸಹ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಇನ್ನು ರಾಜವರ್ಧನ್ ಮತ್ತು ಹರಿಪ್ರಿಯ ನಟನೆಯ ‘ಬಿಚ್ಚುಗತ್ತಿ’ ಸಿನಿಮಾ ನಿರೀಕ್ಷೆ ಮೂಡಿಸಿತ್ತಾದರೂ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿಲ್ಲ. ಇದಾದ ಬಳಿಕ ಬಂದ ಶಿವರಾಜ್ಕುಮಾರ್ ಅಭಿನಯದ ‘ದ್ರೋಣ’ ಮತ್ತು ಚಿರಂಜೀವಿ ಸರ್ಜಾ ಅಭಿನಯದ ‘ಶಿವಾರ್ಜುನ’ ಸಿನಿಮಾ ಸೇರಿದಂತೆ 11 ಸಿನಿಮಾಗಳು ರಿಲೀಸ್ ಆಗಿವೆ.
ಇದನ್ನೂ ಓದಿ: ಲಾಕ್ಡೌನ್ನಲ್ಲಿ ಮನರಂಜಿಸಿದ ಅತ್ಯುತ್ತಮ '2020'ರ ವೆಬ್ಸಿರೀಸ್, ಸಿನಿಮಾಗಳು..
‘ದ್ರೋಣ’ ಮತ್ತು ‘ಶಿವಾರ್ಜುನ’ ಸಿನಿಮಾಗಳು ಪ್ರೇಕ್ಷಕರ ನಿರೀಕ್ಷೆ ಮಟ್ಟ ಮುಟ್ಟುವಲ್ಲಿ ಯಶಸ್ವಿಯಾಗಿಲ್ಲ. ಈ ಸಿನಿಮಾಗಳ ಮಧ್ಯೆ ‘ಲವ್ ಮಾಕ್ಟೈಲ್‘ ಹಾಗೂ ‘ದಿಯಾ’ ಸಿನಿಮಾ ಅದ್ಭುತ ಪ್ರದರ್ಶನಗೊಳ್ಳುತ್ತಿದ್ದ ಸಂದರ್ಭದಲ್ಲಿ ಲಾಕ್ಡೌನ್ ಆದ ಪರಿಣಾಮ ಈ ಎರಡು ಸಿನಿಮಾ ಪ್ರದರ್ಶನವನ್ನು ಸ್ಥಗಿತ ಮಾಡಿ ಚಿತ್ರಮಂದಿಗಳನ್ನು ಮುಚ್ಚಬೇಕಾಯಿತು.
ಕೊರೊನಾದಿಂದ ಚಿತ್ರಮಂದಿಗಳು ಮುಚ್ಚಿದ ಕಾರಣ ಲಾಕ್ಡೌನ್ ಬಳಿಕ ಕನ್ನಡ ಸಿನಿಮಾಗಳು ಒಟಿಟಿಯಲ್ಲಿ ರಿಲೀಸ್ ಆಗಿವೆ. ಪುನೀತ್ ರಾಜ್ಕುಮಾರ್ ನಿರ್ಮಾಣದ ‘ಲಾ’, ‘ಫ್ರೆಂಚ್ ಬಿರಿಯಾನಿ’ ಹಾಗೂ ‘ಭೀಮಸೇನ ನಳಮಹರಾಜ’ ಮತ್ತು ‘ಮನೆ ನಂಬರ್ 13’ ಸಿನಿಮಾಗಳು ಒಟಿಟಿಯಲ್ಲಿ ರಿಲೀಸ್ ಆಗಿವೆ.
ಲಾಕ್ಡೌನ್ ಬಳಿಕ ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ ಮೊದಲ ಸಿನಿಮಾ ‘ಆಕ್ಟ್ 1978’. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಸಾರಥ್ಯದಲ್ಲಿ ಬಂದ ‘ಆಕ್ಟ್-1978’ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಸಿನಿ ಪ್ರೇಕ್ಷಕರನ್ನು ಮತ್ತೆ ಚಿತ್ರಮಂದಿರಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಈ ಸಿನಿಮಾ ಬಳಿಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿ ಸದ್ದು ಮಾಡಿದ ಸಿನಿಮಾ ‘ಶಕೀಲಾ’. ನಿರ್ದೇಶಕ ಇಂದ್ರಜಿತ್ ಲಂಕೇಶ್ ನಿರ್ದೇಶನದ, ರೀಚಾ ಚಡ್ಡಾ ಹಾಗೂ ಪಂಕಜ್ ತ್ರಿಪಾಠಿ ಮುಖ್ಯ ಭೂಮಿಕೆಯಲ್ಲಿರುವ ‘ಶಕೀಲಾ’ ಸಿನಿಮಾವನ್ನು ವಿಮರ್ಶಕರು ಹಾಗೂ ಸಿನಿ ರಸಿಕರು ಮೆಚ್ಚಿಕೊಂಡಿದ್ದಾರೆ.
ಈ ವರ್ಷ ಬರೋಬ್ಬರಿ 75 ಸಿನಿಮಾಗಳು ಬಿಡುಗಡೆ ಆಗಿವೆ. ಒಟಿಟಿಯಲ್ಲಿ 4 ಸಿನಿಮಾಗಳು ರಿಲೀಸ್ ಆದರೆ, ಈ ವರ್ಷ ಲವ್ ಮಾಕ್ಟೈಲ್, ದಿಯಾ, ಆಕ್ಟ್ 1978 ಸಿನಿಮಾಗಳು ಈ ವರ್ಷದ ಹಿಟ್ ಸಿನಿಮಾಗಳ ಸಾಲಿಗೆ ಸೇರಿದವಾಗಿವೆ. ಒಟ್ಟಾರೆ 2020ರಲ್ಲಿ ಒಂದೇ ಒಂದು ಸಿನಿಮಾ ಸಹ 100 ದಿನ ಪೂರೈಸಲೇ ಇಲ್ಲ.
ಇದನ್ನೂ ಓದಿ: ವರ್ಷಾಂತ್ಯದಲ್ಲಿ ಸೆಟ್ಟೇರಿದ ಬಹು ನಿರೀಕ್ಷಿತ 'ರಂಗನಾಯಕ' ಚಿತ್ರ