ಕೋಲ್ಕತ್ತಾ: ಕಳೆದ ನಾಲ್ಕು ದಿನಗಳ ಹಿಂದೆ ನಕಲಿ ಕೋವಿಡ್ ಲಸಿಕೆ ಪಡೆದುಕೊಂಡಿದ್ದ ತೃಣಮೂಲ ಕಾಂಗ್ರೆಸ್ ಸಂಸದೆ ಮಿಮಿ ಚಕ್ರವರ್ತಿ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಸುದ್ದಿವಾಹಿನಿಯೊಂದು ವರದಿ ಮಾಡಿದೆ. ಪಶ್ಚಿಮ ಬಂಗಾಳದ ಸಂಸದೆಯಾಗಿರುವ ಮಿಮಿ ಚಕ್ರವರ್ತಿ ಇದೀಗ ಹೊಟ್ಟೆ ನೋವಿನಿಂದ ಬಳಲುತ್ತಿರುವುದಾಗಿ ತಿಳಿದು ಬಂದಿದ್ದು, ಅವರ ಆರೋಗ್ಯ ಮೇಲೆ ವೈದ್ಯರು ನಿಗಾ ಇಟ್ಟಿದ್ದಾರೆ.
ಕಳೆದ ನಾಲ್ಕು ದಿನಗಳ ಹಿಂದೆ ಕೋಲ್ಕತ್ತಾದ ಮುನ್ಸಿಪಾಲ್ ಕಾರ್ಪೋರೇಷನ್ ಆಯೋಜನೆ ಮಾಡಿದೆ ಎಂದು ಹೇಳಲಾಗಿದ್ದ ಕೋವಿಡ್ ವ್ಯಾಕ್ಸಿನ್ ಸೆಂಟರ್ನಲ್ಲಿ ಅವರು ಲಸಿಕೆ ಪಡೆದುಕೊಂಡಿದ್ದರು. ಆದರೆ, ಈ ವೇಳೆ ಅಲ್ಲಿಂದ ಪ್ರಮಾಣ ಪತ್ರ ಪಡೆದುಕೊಳ್ಳಲು ವಿಫಲವಾಗಿದ್ದರಿಂದ ಅವರಿಗೆ ಅನುಮಾನ ಶುರುವಾಗಿತ್ತು. ಇದೀಗ ಅವರ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ.
ಇದನ್ನೂ ಓದಿರಿ: Mithali Raj ಹೊಸ ದಾಖಲೆ... ತೆಂಡೂಲ್ಕರ್ ಬಳಿಕ ಈ ಸಾಧನೆ ಮಾಡಿದ ವಿಶ್ವದ 2ನೇ ಪ್ಲೇಯರ್!
ನಕಲಿ ಕೋವಿಡ್ ವ್ಯಾಕ್ಸಿನ್ ನೀಡುತ್ತಿದ್ದ ದೇಬಂಜನ್ ದೇಬ್ನನ್ನ ಈಗಾಗಲೇ ಬಂಧನ ಮಾಡಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಸಂಪೂರ್ಣವಾದ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪೊಲೀಸರಿಗೆ ಸೂಚನೆ ನೀಡಿದ್ದಾರೆ.