ದಯಾಳ್ ಪದ್ಮನಾಭನ್ ಹೊಸ ಚಿತ್ರವೊಂದನ್ನು ಕೈಗೆತ್ತಿಕೊಂಡಿದ್ದಾರೆ. ಯೋಗಿ ಅಭಿನಯದ 'ಒಂಬತ್ತನೇ ದಿಕ್ಕು' ನಂತರ ಅವರು ಕನ್ನಡದಲ್ಲಿ ಯಾವೊಂದು ಚಿತ್ರವನ್ನೂ ನಿರ್ದೇಶಿಸಿಲ್ಲ ಎಂದು ಬೇಸರದಲ್ಲಿದ್ದ ಅವರ ಅಭಿಮಾನಿಗಳಿಗೆ ಈ ಸುದ್ದಿಯಿಂದ ಖುಷಿಯಾಗಬಹುದು. ವಿಷಯ ಏನಪ್ಪ ಅಂದ್ರೆ, ಇದು ಕನ್ನಡ ಚಿತ್ರವಲ್ಲ. ಬದಲಿಗೆ ತೆಲುಗು ಚಿತ್ರವೊಂದನ್ನು ನಿರ್ದೇಶಿಸುವುದಕ್ಕೆ ದಯಾಳ್ ತಯಾರಿ ನಡೆಸಿದ್ದಾರೆ.
ಕಳೆದ ವರ್ಷ ದಯಾಳ್, ತಮ್ಮದೇ ಆ ಕರಾಳ ಚಿತ್ರವನ್ನು ತೆಲುಗಿನಲ್ಲಿ 'ಅನಗನಗಾ ಓ ಅತಿಥಿ' ಎಂಬ ಹೆಸರಿನಲ್ಲಿ ರಿಮೇಕ್ ಮಾಡಿದ್ದರು. ಅದು ಆಹಾ ಓಟಿಟಿಯಲ್ಲಿ ಬಿಡುಗಡೆಯಾಗಿ, ಒಂದಿಷ್ಟು ಜನಪ್ರಿಯತೆ ಪಡೆದಿತ್ತು. ಅದನ್ನು ನೋಡಿದ ತೆಲುಗು ನಟ-ನಿರ್ಮಾಪಕ ಮೋಹನ್ ಬಾಬು, ಮೆಚ್ಚುಗೆ ವ್ಯಕ್ತಪಡಿಸಿ, ಒಂದೊಳ್ಳೆಯ ಕಥೆ ಇದ್ದರೆ ಹೇಳಿ ಚಿತ್ರ ಮಾಡೋಣ ಎಂದರಂತೆ. ಆಗ ದಯಾಳ್ ಹೇಳಿದ್ದೇ, 'ಮಾರುತಿ ನಗರ್ ಪೊಲೀಸ್ ಸ್ಟೇಷನ್' ಕಥೆಯನ್ನು.
ಇದನ್ನೂ ಓದಿ: ಈ ನಟ ಹೊಸ ಸಿನಿಮಾಗಳ 'ಅಕ್ಷಯ' ಪಾತ್ರೆ: 'ರಾಕ್ಷಸನ್' ರಿಮೇಕ್‌ನಲ್ಲಿ ಮಿಂಚಲು ರೆಡಿ
ಈ ಕಥೆ ಕೇಳಿ ಮೆಚ್ಚಿಕೊಂಡ ಮೋಹನ್ ಬಾಬು, ದಯಾಳ್ಗೆ ಚಿತ್ರ ನಿರ್ದೇಶಿಸುವುದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅದರಂತೆ ಪ್ರಿ-ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ದಯಾಳ್, ಆಗಸ್ಟ್ ಎರಡನೆಯ ವಾರದಿಂದ ಚಿತ್ರೀಕರಣ ಪ್ರಾರಂಭಿಸುವುದಕ್ಕೆ ಸಿದ್ಧತೆ ನಡೆಸಿದ್ದಾರೆ. ಚಿತ್ರವನ್ನು ಒಂದೇ ಹಂತದಲ್ಲಿ ತಿರುಪತಿ ಸುತ್ತಮುತ್ತ ಚಿತ್ರೀಕರಣ ಮಾಡುವುದಕ್ಕೆ ಅವರು ಪ್ಲಾನ್ ಹಾಕಿಕೊಂಡಿದ್ದಾರೆ.
ಅನಗನಗಾ ಓ ಅತಿಥಿ ಚಿತ್ರಕ್ಕೆ ಅವರು ಕನ್ನಡದ ತಂತ್ರಜ್ಞರನ್ನು ಕರೆದುಕೊಂಡು ಹೋಗಿದ್ದರು. ಈ ಬಾರಿ ಸಹ ಅದು ಮುಂದುವರೆಯಲಿದೆ. ಚಿತ್ರದಲ್ಲಿ ಛಾಯಾಗ್ರಾಹಕ ಶೇಖರ್ ಚಂದ್ರು ಮತ್ತು ಕ್ರೇಜಿಮೈಂಡ್ಸ್ ಶ್ರೀ ಕೆಲಸ ಮಾಡಲಿದ್ದಾರೆ. ಮಿಕ್ಕಂತೆ ಕಲಾವಿದರ ಆಯ್ಕೆ ನಡೆಯುತ್ತಿದ್ದು, ಶೀಘ್ರದಲ್ಲೇ ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿಯನ್ನು ದಯಾಳ್ ನೀಡಲಿದ್ದಾರೆ.