ದೇಶಾದ್ಯಂತ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಹಬ್ಬದ ದಿನದಂದೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಪ್ಯಾನ್ ಇಂಡಿಯಾ ಹೊಸ ಸಿನಿಮಾದ ಹೆಸರು ಘೋಷಣೆ ಮಾಡಲಾಗಿದ್ದು, ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
![d](https://etvbharatimages.akamaized.net/etvbharat/prod-images/kn-bng-01-ganesha-habbhakke-darshan-55th-movie-announced-7204735_10092021121950_1009f_1631256590_239.jpg)
ದರ್ಶನ್ ಅಭಿನಯಿಸುತ್ತಿರುವ 55ನೇ ಚಿತ್ರ ಇದಾಗಿದ್ದು, ಈ ಸಿನಿಮಾಕ್ಕೆ 'ಕ್ರಾಂತಿ' ಎಂದು ಟೈಟಲ್ ಇಡಲಾಗಿದೆ. ಸದ್ಯ ಬಿಡುಗಡೆ ಆಗಿರುವ ಪೋಸ್ಟರ್‌ನಲ್ಲಿ ದರ್ಶನ್ ಮಾಸ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಕಾರೊಂದು ವೇಗವಾಗಿ ಹೋಗುತ್ತಿರುವ ಚಿತ್ರವೂ ಇದೆ.
![Darshan 55th Movie Announced](https://etvbharatimages.akamaized.net/etvbharat/prod-images/kn-bng-05-darshan-kashame-kelabeku-indrajith-lankesh-7204735_16072021183849_1607f_1626440929_593.jpg)
ಇದನ್ನೂ ಓದಿ: ಗೌರಿ ಹಬ್ಬಕ್ಕೆ ಸೆಟ್ಟೇರಿತು 'ಲವ್ ಮಿ ಔರ್ ಹೇಟ್ ಮಿ': ತೆರೆ ಮೇಲೆ ಡಾರ್ಲಿಂಗ್ ಕೃಷ್ಣ - ರಚಿತಾ ರಾಮ್ ಮೋಡಿ
'ಗಣೇಶ ಹಬ್ಬದ ಶುಭಾಶಯಗಳು' ಎಂಬ ಪದಗಳು ಸೇರಿದಂತೆ ಇತರ ಪದಗಳು, ಹೆಲಿಕಾಪ್ಟರ್, ಕಟ್ಟಡಗಳನ್ನು ನಾವು ಈ ಪೋಸ್ಟರ್‌ನಲ್ಲಿ ನೋಡಬಹುದಾಗಿದೆ. ಪೋಸ್ಟರ್ ನೋಡಿದರೆ ಇದೊಂದು ಪಕ್ಕಾ ಆಕ್ಷನ್ ಸಿನಿಮಾ ಎಂದು ಹೇಳಬಹುದಾಗಿದೆ. ಈ ಹಿಂದೆ ದರ್ಶನ್ ನಟನೆಯ 'ಯಜಮಾನ' ಸಿನಿಮಾ ನಿರ್ಮಾಣ ಮಾಡಿದ್ದ ಶೈಲಜಾ ನಾಗ್ ಮತ್ತು ಬಿ ಸುರೇಶ್ ಅವರೇ ಈ ಚಿತ್ರವನ್ನೂ ನಿರ್ಮಿಸುತ್ತಿದ್ದಾರೆ. ಸಂಗೀತ ನಿರ್ದೇಶಕ ಹರಿಕೃಷ್ಣ ಅವರು 'ಕ್ರಾಂತಿ' ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ವಿ.ಹರಿಕೃಷ್ಣ ಅವರಿಗೆ ನಿರ್ದೇಶಕರಾಗಿ ಇದು ಎರಡನೇ ಸಿನಿಮಾ ಆಗಿದೆ.
![Kranti](https://etvbharatimages.akamaized.net/etvbharat/prod-images/13023491_gann.jpg)
ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ 'ಕ್ರಾಂತಿ' ಮೂಡಿ ಬರಲಿದೆ. ಕೊನೆಯದಾಗಿ 'ರಾಬರ್ಟ್' ಸಿನಿಮಾ ಮೂಲಕ ದಚ್ಚು ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಇದೀಗ 'ಯಜಮಾನ' ಚಿತ್ರತಂಡ ಮತ್ತೆ ದರ್ಶನ್ ಜೊತೆ 'ಕ್ರಾಂತಿ' ಸಿನಿಮಾ ಮಾಡ್ತಾ ಇರೋದು ಅಭಿಮಾನಿಗಳಿಗೆ ಖುಷಿ ತಂದಿದೆ.