ಕೊರೊನಾದಿಂದಾಗಿ ಕರ್ನಾಟಕದ 9 ಮೃಗಾಲಯಗಳಿಗೂ ಸಮಸ್ಯೆ ಆಗಿದೆ. ಪ್ರಾಣಿ ಸಂಕುಲಕ್ಕೂ ಕೊರೊನಾ ಕಂಟಕವಾಗಿದೆ. ಪ್ರಾಣಿಗಳ ದತ್ತು ಸ್ವೀಕರಿಸಿ ಸಹಾಯ ಮಾಡಿ ಎಂದು ನಟ, ಅರಣ್ಯ ಇಲಾಖೆ ರಾಯಭಾರಿ ದರ್ಶನ್ ಮಾಡಿದ್ದ ಮನವಿಗೆ ಭಾರೀ ಸ್ಪಂದನೆ ವ್ಯಕ್ತವಾಗಿದೆ.
ವಿಡಿಯೋ ಬಿಡುಗಡೆ ಮಾಡಿದ್ದ ಚಾಲೆಂಜಿಂಗ್ ಸ್ಟಾರ್, ಮನೆಯಲ್ಲಿ ಪ್ರಾಣಿ ಸಾಕಲು ಎಲ್ಲರಿಗೂ ಆಗಲ್ಲ. ಆದರೆ, ಮೃಗಾಲಯದಲ್ಲಿರುವ ಪ್ರಾಣಿಗಳನ್ನು ದತ್ತು ಪಡೆಯಬಹುದು. ಒಂದು ಲವ್ ಬರ್ಡ್‌ಗೆ 1,000 ರೂ., ಹುಲಿಗೆ 1 ಲಕ್ಷ ರೂ. ಹಣ ಕಟ್ಟಬೇಕು. ಒಂದು ವರ್ಷಗಳ ಕಾಲ ಅವುಗಳ ನಿರ್ವಹಣೆಯನ್ನು ದತ್ತು ಪಡೆದವರ ಹೆಸರಿನಲ್ಲಿ ಮಾಡುತ್ತಾರೆ. ಪ್ರಾಣಿ-ಪಕ್ಷಿಗಳನ್ನು ದತ್ತು ಪಡೆಯಲು ಝೂ ಆಫ್ ಕರ್ನಾಟಕ ಆ್ಯಪ್ ಮೂಲಕ ಮಾಹಿತಿ ಪಡೆಯಬಹುದು ಅಥವಾ ನಿಮ್ಮ ಸಮೀಪದ ಝೂಗೆ ಭೇಟಿ ನೀಡಿದರೆ, ಅಲ್ಲಿಯೂ ಮಾಹಿತಿ ಪಡೆದುಕೊಳ್ಳಬಹುದು ಎಂದಿದ್ದರು.
ದರ್ಶನ್ ಅವರು ಮನವಿ ಮಾಡಿದ್ದ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಅವರ ಅಭಿಮಾನಿಗಳ ಪ್ರಾಣಿಗಳನ್ನು ದತ್ತು ಪಡೆಯಲು ಮುಂದಾಗಿದ್ದಾರೆ. ಮೈಸೂರಿನ ಶ್ರೀಚಾಮರಾಜೇಂದ್ರ ಮೃಗಾಲಯ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಸೇರಿದಂತೆ ರಾಜ್ಯದ ವಿವಿಧ ಮೃಗಾಲಯಗಳಲ್ಲಿರುವ ಪ್ರಾಣಿ-ಪಕ್ಷಿಗಳನ್ನು ದತ್ತು ಪಡೆದುಕೊಂಡಿದ್ದಾರೆ.
ಮಂಡ್ಯದ ದರ್ಶನ್ ಸೇನಾ ಸಮಿತಿಯೂ ಚಾಮರಾಜೇಂದ್ರ ಮೃಗಾಲಯದಲ್ಲಿರುವ ಲವ್‌ಬರ್ಡ್ಸ್‌ಗಳನ್ನು ದತ್ತು ಪಡೆದುಕೊಂಡಿದೆ. ಹೀಗೆ ಹಲವರಿಂದ ಸ್ಪಂದನೆ ವ್ಯಕ್ತವಾಗಿದ್ದು, ದತ್ತು ಪಡೆದುಕೊಂಡಾಗ ಮೃಗಾಲಯದ ವತಿಯಿಂದ ನೀಡುವ ಪ್ರಮಾಣ ಪತ್ರಗಳನ್ನು ದರ್ಶನ್ ಅವರು ತಮ್ಮ ಫೇಸ್‌ಬುಕ್ ಹಾಗೂ ಟ್ವಿಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿಕೊಂಡು, ದತ್ತು ಪಡೆದವರಿಗೆ ಧನ್ಯವಾದ ತಿಳಿಸಿದ್ದಾರೆ.